ಬೆಂಗಳೂರು: ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಮುರುಡೇಶ್ವರದ ಬೃಹತ್ ಈಶ್ವರ ಪ್ರತಿಮೆ ಚಿತ್ರ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿ ಸಂಚಿರಬಹುದೆಂಬ ಅನುಮಾನ ಮೂಡುವಂತೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಶಿವನ ವಿಗ್ರಹದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ‘ಐಸಿಸ್’(ISIS)ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಂಶುಲ್ ಸಕ್ಸೇನಾ ಎಂಬುವವರು ಇದನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿ ಸರ್ಕಾರಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ‘ಐಸಿಸ್’ ಮುಖವಾಣಿ ಪತ್ರಿಕೆ ‘ದಿ ವಾಯ್ಸ್ ಆಫ್ ಹಿಂದ್’ನಲ್ಲಿ ಮುರುಡೇಶ್ವರದ ಶಿವನ ವಿಗ್ರಹವನ್ನು ಪ್ರಕಟಿಸಲಾಗಿದೆ. ಅದರ ಮೇಲೆ ‘ಇದು ನಕಲಿ ದೇವರನ್ನು ಒಡೆಯುವ ಸಮಯ’ ಎಂಬ ವಾಕ್ಯವನ್ನು ಬರೆಯಲಾಗಿದೆ. ಅಲ್ಲದೆ ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಮಾದರಿಯ ಧ್ವಜ ಹಾರಾಡುತ್ತಿರುವಂತೆ ಚಿತ್ರಿಸಲಾಗಿದೆ.
ಇನ್ನು ಪೋಸ್ಟ್ ನ ಅಧಿಕೃತತೆ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಈ ಕುರಿತು ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅಂಶುಲ್ ಸಕ್ಸೇನಾ ತಮ್ಮ ಪೋಸ್ಟ್ನಲ್ಲಿ ಸರ್ಕಾರಗಳನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ತಕ್ಷಣದ ಪ್ರತಿಕ್ರಿಯೆ ತಿಳಿದುಬಂದಿಲ್ಲ.
ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಮತ್ತು ಇಂತಹ ದುಷ್ಕೃತ್ಯಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……