ದೊಡ್ಡಬಳ್ಳಾಪುರ: ಜನರಪಾಲಿಗೆ ಕಂಟಕವಾಗಿ ಕಾಡುತ್ತಿರುವ ತಾಲ್ಲೂಕಿನ ಚಿಗೇರನಹಳ್ಳಿ ಸಮೀಪದ ಎಂಎಸ್ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆ ವಿರುದ್ದ ಮತ್ತೊಂದು ಸುತ್ತಿನ ಹೋರಾಟ ಇಂದಿನಿಂದ ಆರಂಭವಾಗುತ್ತಿದೆ.
ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಗಳಿಂದ ಮಿತಿ ಮೀರಿ ಕಸ ತುಂಬಿದ ಲಾರಿಗಳು ಬರುತ್ತಿದ್ದು ಕಸದ ರಾಶಿ ಬೆಟ್ಟದಂತೆ ಬಿದ್ದು ಕಸದ ತ್ಯಾಜ್ಯದಿಂದ ಹೊರಬರುತ್ತಿರುವ ರಾಸಾಯನಿಕ ಯುಕ್ತ ನೀರು ಜನರ ನಿದ್ದೆಗೆಡಿಸಿದೆ.
ಈ ಹಿಂದೆ ಕಸ ನಿಲ್ಲಿಸುವಂತೆ ಒಂದು ವಾರಗಳ ಕಾಲ ನಡೆದ ಧರಣಿ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೋರಾಟಗಾರರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಮರೆತಿದ್ದಾರೆ.
ಕಸ ವಿಲೇವಾರಿ ಘಟಕದಿಂದ ಹೊರ ಬರುವ ರಾಸಾಯನಿಕಯುಕ್ತ ನೀರನ್ನು ತಡೆಯಲು ಗೋಡೆ ನಿರ್ಮಿಸುವುದು, ಕಸದ ಲಾರಿಗಳ ಸಂಖ್ಯೆ ತಗ್ಗಿಸುವುದು, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಸೇರಿದಂತೆ ಯಾವುದೇ ಭೇಡಿಕೆಗಳು ಈಡೇರಿಲ್ಲ. ಹೀಗಾಗಿ ಬಿಬಿಎಂಪಿ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಗಳ ಜನರು ಪಕ್ಷಾತೀತವಾಗಿ ನ.24 ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುವ ಮೂಲಕ ಬಿಬಿಎಂಪಿ ವ್ಯಾಪ್ತಿಗಳಿಂದ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುವ ಲಾರಿಗಳನ್ನು ತಡೆಯಲಿದ್ದಾರೆ.
ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಗಳ ಜನರು ಧರಣಿ ನಡೆಸುತ್ತಿರುವುದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನ.24 ರಿಂದ ಕಸ ವಿಲೇವಾರಿ ಸಮಸ್ಯೆ ತಲೆದೋರಿ ಬಿಸಿ ಮುಟ್ಟುವ ಸಾಧ್ಯತೆಯಿದೆ.
ಈಗಾಗಲೇ ಮಳೆ ಸೃಷ್ಠಿಸಿರುವ ಅವಾಂತರದಿಂದಾಗಿ ಬೆಂಗಳೂರು ನಗರದ ಜನ ಪರದಾಡುವಂತಾಗಿದೆ. ಇನ್ನು ಕಸದ ರಾಶಿ ಬೀಳಲು ಆರಂಭವಾದರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುವಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……