ಧಾರವಾಡ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿ ಎಂ) ವೈದ್ಯಕೀಯ ಮಹಾವಿದ್ಯಾಲಯದ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲ 400 ವಿದ್ಯಾರ್ಥಿಗಳು ಹಾಗೂ 3 ಸಾವಿರ ಸಿಬ್ಬಂದಿಯ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎರಡು ಹಾಸ್ಟೇಲುಗಳನ್ನು ಸೀಲ್ ಡೌನ್ ಮಾಡಲಾಗಿದೆ.ಸೋಂಕಿತರು ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ತೀವ್ರತರ ರೋಗ ಲಕ್ಷಣಗಳು ಕಂಡು ಬಂದಿಲ್ಲ, ಔಷಧೋಪಚಾರ, ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.
ಸತ್ತೂರಿನ ಎಸ್.ಡಿ.ಎಂ.ವೈದ್ಯಕೀಯ ಕಾಲೇಜು ಆವರಣಕ್ಕೆ ಭೇಟಿ ನೀಡಿ, ಹಾಸ್ಟೇಲು ಸೀಲ್ ಡೌನ್ ಪ್ರದೇಶ ಪರಿಶೀಲಿಸಿ, ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ 17 ನೇ ತಾರೀಖಿನಂದು ಕಾಲೇಜಿನ ಆವರಣದ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹಲವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಸಂಸ್ಥೆಯ 400 ಪದವಿ ವಿದ್ಯಾರ್ಥಿಗಳಲ್ಲಿ ಈಗಾಗಲೇ 300 ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ವರದಿ ಬಂದಿದ್ದು 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 100 ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗುತ್ತಿದೆ. ಎರಡು ಹಾಸ್ಟೇಲುಗಳನ್ನು ಸೀಲ್ ಡೌನ್ ಮಾಡಿ,ಸೋಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದೆ.ತಪಾಸಣೆಗೆ ಒಳಪಟ್ಟವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಆವರಣದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 3 ಸಾವಿರ ಸಿಬ್ಬಂದಿಯನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಪೊಲೀಸ್ ಹಾಗೂ ಎಸ್‍ಡಿಎಂ ಆಡಳಿತ ಮಂಡಳಿ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿವೆ.
ಸದ್ಯ ಸೋಂಕು ವಿದ್ಯಾರ್ಥಿಗಳಲ್ಲಿ ಮಾತ್ರ ಕಾಣಿಸಿಕೊಂಡಿರುವುದರಿಂದ ಈ ವಲಯದಲ್ಲಿ ನಿಯಂತ್ರಿಸಲಾಗುತ್ತಿದೆ. ಕಾಲೇಜಿನ ವೈದ್ಯಕೀಯ ವಿಭಾಗವು ತೀವ್ರ ನಿಗಾವಹಿಸಿ, ಚಿಕಿತ್ಸೆ, ಔಷಧೋಪಚಾರ ನೀಡುತ್ತಿದೆ ಎಂದರು.
17 ನೇ ತಾರೀಖಿನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಪರ್ಕಿತರ ತಪಾಸಣೆಗೆ ಸೂಚನೆ: ಕಾಲೇಜಿನ ಅವರಣದ ಕಲಾಕ್ಷೇತ್ರದಲ್ಲಿ ಕಳೆದ ನ.17 ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ತಪಾಸಣೆಗೆ ಒಳಪಟ್ಟು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಕೈ ಬಿಡುವುದು ಉತ್ತಮ, ಅನಿವಾರ್ಯವಿದ್ದರೆ ಮಾಸ್ಕ್ ಧರಿಸಿ,ಸ್ಯಾನಿಟೈಸರ್ ಬಳಸಿ, ಸುರಕ್ಷಿತ ಅಂತರದ ನಿಯಮಗಳನ್ನು ಪಾಲಿಸಿ, ಜನಸಂದಣಿಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಎಸ್ ಡಿ ಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ರತ್ನಮಾಲಾ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……
 
				 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						