ದೊಡ್ಡಬಳ್ಳಾಪುರ: ಕಸ ಟೆಂಡರ್ ಪಡೆದವರ ಏಕೈಕ ಉದ್ದೇಶ ಬೆಂಗಳೂರು ನಗರದಿಂದ ಕಸ ಹೊರ ಹೋಗಬೇಕು ಎನ್ನುವುದೇ ಹೊರತು ಕಸದ ರಾಶಿ ಹಾಕುವ ಪ್ರದೇಶದಲ್ಲಿನ ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಾಗಿದೆ ಎಂದು ಕುಣಿಗಲ್ ತಾಲ್ಲೂಕಿನ ಕಿತ್ನಾಮಂಗಲ-ಕಾಡುಮತ್ತಿಕೆರೆ ಶ್ರೀಅರೆಶಂಕರಮಠದ ಸಿದ್ಧರಾಮಚೈತನ್ಯ ಮಹಾಸ್ವಾಮೀ ದೂರಿದ್ದಾರೆ.
ತಾಲ್ಲೂಕಿನ ಚಿಗರನೇಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಗ್ರಾಮಸ್ಥರು ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದರು.
ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ಇಲ್ಲಿನ ಗ್ರಾಮಗಳ ಜನರ ಬದುಕು ನರಕಮಯವಾಗಿದೆ. ಈ ಕುರಿತಂತೆ ಹಲವಾರು ಬಾರಿ ಪ್ರತಿಭಟನೆಗಳನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವಕಾಶ ನೀಡಿದ್ದಾರೆ. ಅದರೂ ಸಹ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿಲ್ಲ. ಹೀಗಾಗಿ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸುವವರೆಗೂ ಧರಣಿಯನ್ನು ಮುಂದುವರೆಸುವುದೇ ಅಂತಿಮ ನಿರ್ಧಾರವಾಗಬೇಕಿದೆ. ಜನಪರವಾದ ಹೋರಾಟಗಳನ್ನು ನಡೆಸುವ ಮುಂದಾಳತ್ವವಹಿಸುವವರ ಮೇಲೆ ಆರೋಪಗಳು ಬರುವುದು ಸಹಜ. ಈ ಎಲ್ಲಾ ಆರೋಪಗಳನ್ನು ಮೆಟ್ಟಿನಿಂತಾಗ ಮಾತ್ರ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಜನರ ಬದುಕು ಸುಧಾರಿಸಲು ಸಾಧ್ಯ. ನಮ್ಮ ಸುತ್ತಲಿನ ಪರಿಸರ ಕೆಟ್ಟರೆ ಮತ್ತೆ ಸರಿಪಡಿಸಲು ದಶಕಗಳೇ ಬೇಕಾಗಲಿದೆ. ಕಸದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ರಾಜಕೀಯ ಲಾಭಗಳನ್ನು ಹುಡುಕದೆ ಪ್ರಮಾಣಿಕ ಹೋರಾಟ ನಡೆಸಬೇಕಿದೆ ಎಂದರು.
ಧರಣಿಯ ಮುಂದಾಳತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಸಿದ್ದಲಿಂಗಯ್ಯ ಮಾತನಾಡಿ, 2015 ರಿಂದಲೆ ಕಸ ವಿಲೇವಾರಿಯನ್ನು ವಿರೊಧಿಸುತ್ತಲೇ ಬಂದಿದ್ದೇವೆ. ದಿನಕ್ಕೆ 400 ಮೆಟ್ರಿಕ್ ಟನ್ ಕಸ ವಿಲೇವಾರಿ ಮಾಡುವುದಾಗಿ ಹೇಳಲಾಗಿತ್ತು. ಈಗ ಘಟಕದ ಕಸ ವಿಲೇವಾರಿ ಸಾಮರ್ಥ್ಯವನ್ನು ಮೀರಿ ದಿನಕ್ಕೆ 4,500 ಸಾವಿರ ಮೆಟ್ರಿಕ್ ಟನ್ ಬೆಂಗಳೂರಿನ ಕಸವನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ನಮ್ಮ ಗ್ರಾಮಗಳಿಗೆ ಬಿಬಿಎಂಪಿ ನೀಡುವ ಸೌಲಭ್ಯಗಳು ಬೇಕಿಲ್ಲ. ಎಂಎಸ್ ಪಿ ಘಟಕವನ್ನು ಇಲ್ಲಿಂದ ಎತ್ತಂಗಡಿ ಮಾಡಿ ನಮ್ಮ ಬದುಕನ್ನು ಉಳಿಸಲಿ ಎಂದು ಆಗ್ರಹಿಸಿದರು.
ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಹಾಗೂ ಜೆಡಿಎಸ್ ಮುಖಂಡ ಹರೀಶ್ ಗೌಡ ಧರಣಿ ಸ್ಥಳಕ್ಕೆ ಭೇಟಿ ಮಾಹಿತಿ ಪಡೆದಿದ್ದಲ್ಲದೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್, ಮುಖಂಡರಾದ ಅಶ್ವತ್ಥನಾರಾಯಣ, ದೇವರಾಜಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಲತಾ,ಪ್ರಸನ್ನ ಸೇರಿದಂತೆ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.
ಕದ್ದುಮುಚ್ಚಿ ಭೇಟಿ: ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಇಷ್ಟೊಂದು ದಾರಿತಪ್ಪಿ ನಡೆಯಲು ಪರಿಸರ ಮಾಲಿನ್ಯ ನಿಯಂತ್ರ ಮಂಡಲಿಯರವರೇ ಹೊಣೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಧರಣಿ ನಿರತರಿಗೆ ತಿಳಿಯದಂತೆ ಎಂಎಸ್ ಜಿಪಿ ಘಟಕ ಪ್ರವೇಶ ಮಾಡಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಪರಿಸರ ಅಧಿಕಾರಿ ಸುನಿತಾ, ಸಹಾಯಕ ಅಧಿಕಾರಿ ವಾಣಿ ಅವರನ್ನು ಹಿಂಬಾಲಿಸಿ ಹೋಗಿ ಕಸದಿಂದ ಹೊರ ಬಂದಿರುವ ಕಲುಷಿತ ನೀರನ್ನು ಸಂಗ್ರಹ ಮಾಡಿಕೊಳ್ಳುವಂತೆ ಹಾಗೂ ಅಲ್ಲಿನ ವಾಸ್ತವ ಸ್ಥಿತಿಯ ಕುರಿತು ವರದಿ ನೀಡುವಂತೆ ಮನವಿ ಮಾಡಿದರು.
‘ಇಲ್ಲಿನ ಕಸ ವಿಲೇವಾರಿ ಘಟಕದಿಂದ ಆಗುತ್ತಿರುವ ತೊಂದರೆಗಳ ಕುರಿತಂತೆ ಹಲವಾರು ಬಾರಿ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳಿಗೆ ನೋಂದಾಯಿತ ಅಂಚೆ ಮೂಲಕ ದೂರು ನೀಡಿದ್ದರು ಒಂದು ಪತ್ರಕ್ಕು ಉತ್ತರ ನೀಡಿಲ್ಲ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿಲ್ಲ. ಧರಣಿ ಆರಂಭಿಸಿದ್ದರಿಂದ ಇಂದು ಇಲ್ಲಿಗೆ ಭೇಟಿ ನೀಡಿದ್ದೀರಿ. ಈಗಲಾದರು ಸರಿಯಾದ ರೀತಿಯಲ್ಲಿ ವರದಿ ನೀಡಿ’ ಎಂದು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಪರಿಸರ ನಿಯಂತ್ರಣ ಮಂಡಲಿ ಅಧಿಕಾರಿಗಳಾದ ಸುನಿತಾ ‘ನಮಗೆ ಇದುರೆಗೂ ಯಾವುದೇ ಮನವಿಯು ಬಂದಿಲ್ಲ’ ಎಂದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
 
				 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						