ಬೆಂಗಳೂರು: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ. ಆತಂಕಗೊಳ್ಳುವುದು ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಯ ನೀಡಿದ್ದಾರೆ.
ಕರೊನಾ ಎರಡನೇ ಅಲೆ ಕಡಿಮೆಯಾಗಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿರುವಾಗ ಇತ್ತೀಚೆಗಷ್ಟೇ ಶಾಲೆಗಳು ಆರಂಭವಾಗಿದ್ದವು. ಈಗ ಮತ್ತೆ ಅಲ್ಲಲ್ಲಿ ಶಾಲಾ-ಕಾಲೇಜು ಮಕ್ಕಳಲ್ಲಿ ಸೋಂಕು ಉಲ್ಭಣವಾಗುತ್ತಿದೆ. ಈ ಬಗ್ಗೆ ಇಂದು ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೋನಾ ಸೋಂಕು ಹೆಚ್ಚಳವಾದರೆ ಬದಲಿ ಕ್ರಮ ಏನು ತೆಗೆದುಕೊಳ್ಳಬೇಕೆಂದು ಯೋಚಿಸುತ್ತೇವೆ. ಅಕಸ್ಮಾತ್ ಪರೀಕ್ಷೆ ಮತ್ತು ಭೌತಿಕ ತರಗತಿಗಳನ್ನು ನಿಲ್ಲಿಸಬೇಕೆಂದರೆ ಆ ಕ್ರಮಕ್ಕೂ ಸಿದ್ಧರಿದ್ದೇವೆ ಎಂದರು. ಅಂದರೆ ಅಗತ್ಯಬಿದ್ದರೆ ಶಾಲೆಗಳನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳುವ ಸೂಚನೆಯನ್ನು ಶಿಕ್ಷಣ ಸಚಿವರು ಇಂದು ನೀಡಿದ್ದಾರೆ.
ಕೊನೆಯ ದಿನದವರೆಗೂ ಬೆಳವಣಿಗೆಗಳನ್ನು ಗಮನಿಸುತ್ತೇವೆ, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಶಿಕ್ಷಣ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಶಾಲೆಗಳನ್ನು, ಪರೀಕ್ಷೆಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾದರೆ ಹಿಂದೇಟು ಹಾಕುವುದಿಲ್ಲ, ಇವತ್ತಿನ ತಜ್ಞರ ವರದಿಯಲ್ಲಿ ಯಾವುದೇ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….