ಬೆಂ.ಗ್ರಾ.ಜಿಲ್ಲೆ: ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರುವ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವುದು ಎಲ್ಲರ ಗುರುತರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದಿಂದ ಜೀವಿಸುವ ಹಕ್ಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಜಾತಿ, ಧರ್ಮ, ಲಿಂಗ, ಭಾಷೆ, ವರ್ಣದ ಆಧಾರದ ಮೇಲೆ ಮನುಷ್ಯನನ್ನು ಅವಹೇಳನ ಮಾಡುವಂತಿಲ್ಲ. ಮನುಷ್ಯನ ಘನತೆಗೆ ಕುಂದುಬಾರದಂತೆ ಗೌರವಯುತ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯವಶ್ಯಕ ಎಂದರಲ್ಲದೆ, ಎಲ್ಲರನ್ನೂ ಗೌರವಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರನ್ನು ರೂಢಿಸಿಕೊಳ್ಳಬೇಕು ಎಂದರು.
ಮನುಷ್ಯನ ಘನತೆ, ಭದ್ರತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಕುಂದುಬಾರದಂತೆ ರಕ್ಷಿಸುವುದೇ ಮಾನವ ಹಕ್ಕುಗಳ ಉದ್ದೇಶವಾಗಿದ್ದು, ಮಾನವ ಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿವೆ ಎಂದರು.
ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಅವರು ಮಾತನಾಡಿ ಮಾನವ ಹಕ್ಕುಗಳು ಎಲ್ಲ ವಯೋಮಾನದವರಿಗೂ ಇದೆ ಎಂದರಲ್ಲದೆ, ಈ ಹಕ್ಕುಗಳು ಉಲ್ಲಂಘನೆಯಾಗದಂತೆ ರಕ್ಷಿಸುವ ಕೆಲಸ ಮಾನವ ಹಕ್ಕು ಆಯೋಗ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ದೇವನಹಳ್ಳಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ ಅವರು ಮಾನವ ಹಕ್ಕುಗಳ ಆಯೋಗದ ಉದ್ದೇಶ, ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯುವಿಕೆ, ಉಲ್ಲಂಘನೆಯಾದಲ್ಲಿ ಅವುಗಳ ರಕ್ಷಣೆಗೆ ಕ್ರಮ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾದ ವ್ಯಕ್ತಿಗೆ ಪುನರ್ವಸತಿ ಕಲ್ಪಿಸುವ ಕುರಿತು ವಿವರವಾದ ಮಾಹಿತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ಅಡ್ವೊಕೇಟ್ ಚಿನ್ನಮ್ಮ ಅವರು ಮಾತನಾಡಿ ಮಾನವ ಹಕ್ಕುಗಳ ಕುರಿತು ಬೇರೆ ಬೇರೆ ದೇಶಗಳಲ್ಲಿ ನಡೆದ ಪ್ರಕ್ರಿಯೆ ಕುರಿತು ವಿವರಿಸಿದರಲ್ಲದೆ, ಪೊಲೀಸ್ ಇಲಾಖೆ, ಜೈಲುಗಳಲ್ಲಿ, ಕಾರ್ಖಾನೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಬಹಳ ದೂರುಗಳು ಕೇಳಿ ಬರುತ್ತಿವೆ ಎಂದರು.
ಸಂವಿಧಾನಾತ್ಮಕವಾಗಿ ಬಂದಿರುವ ಮೂಲಭೂತ ಹಕ್ಕುಗಳನ್ನು ಜನತೆ ಸರಿಯಾಗಿ ಪಾಲನೆ ಮಾಡದ ಹಿನ್ನೆಲೆ, ಮಾನವ ಹಕ್ಕುಗಳ ಆಯೋಗ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಎನ್.ನಟರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….