ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ ದಳವಿಗೆ ಕಪ್ಪು ಮಸಿ ಬಳದಿರುವುದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಪುಂಡತನ ಮೆರೆದಿದ್ದನ್ನು ಖಂಡಿಸಿ ಕನ್ನಡದ ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಆರಂಭಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ನಟ ದರ್ಶನ್, ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದಿದ್ದಾರೆ.
ಹಿರಿಯ ನಟ ಶಿವರಾಜ್ ಕುಮಾರ್ ಕೂಡ ಕನ್ನಡದ ಪರ ನಿಂತಿದ್ದು, ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ ಎಂದು ಬರೆದಿದ್ದಾರೆ. ಅಲ್ಲದೆ, #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ #releasekannadaactivists ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಜ್ವಲ್ ದೇವರಾಜ್ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದು, ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ ಜೈ ಕನ್ನಡ ಜೈ ಕರ್ನಾಟಕ ಎಂದಿದ್ದಾರೆ.
ಮತ್ತೊಂದೆಡೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಕೊಲ್ಲಾಪುರದಲ್ಲಿ ನಮ್ಮ ಧ್ವಜ ದಹನ ಮಾಡಿರುವುದು ಅತ್ಯಂತ ನೀಚತನದ ಪರಮಾವಧಿ. ಕನ್ನಡ ದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರ್ತಿಸಬೇಕು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ.
ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯಕ್ಕೆ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು.
ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಒಂದು ವೇಳೆ ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಎಂಬುದು ನನ್ನ ಆಗ್ರಹ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….