ಬೆಂಗಳೂರು: ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ವೇಳೆ ಭದ್ರತಾ ವಿಫಲತೆ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಸುಳ್ಳು ಹೇಳಿದ್ದು, ಕಾಂಗ್ರೆಸ್‍ನವರು ಅವರಿಂದ ಸುಳ್ಳು ಹೇಳಿಸಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಸುಳ್ಳನ್ನು ಹೇಳುವವರಿಗೆ ಮಾತ್ರ ಅವಕಾಶ ಇದೆ. ಆ ಪಕ್ಷದಲ್ಲಿದ್ದ ನಾನು ಸತ್ಯ ಹೇಳಲು ಬಿಜೆಪಿಗೆ ಬಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಸುಳ್ಳು ಹೇಳಿದ್ದನ್ನು ನಾನು ನೋಡಿರಲಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಾಂಗ್ರೆಸ್‍ನವರು ಸುಳ್ಳು ಹೇಳಿಸಿದ್ದಾರೆ ಎಂದು ಆರೋಪಿಸಿದರು.
ದಲಿತ ವಿಚಾರವನ್ನು ತಂದಿದ್ದಾರೆ. ಪಂಜಾಬ್‍ನ ದಲಿತ ಸಿಎಂ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಹೀಗೆ ಮಾಡಿದ್ದಾರೆ ಎಂದಿದ್ದಾರೆ. ಇದು ಆಕ್ಷೇಪಾರ್ಹ. ಖಾಲಿಸ್ತಾನ ಮತ್ತು ಪಾಕಿಸ್ತಾನದ ಜೊತೆ ಪಂಜಾಬ್ ಸರಕಾರ ಕೈಜೋಡಿಸಿದೆ ಎಂದು ಆರೋಪಿಸಿದರು.
ಈ ಘಟನೆಯನ್ನು ದೇಶದ ಎಲ್ಲ ಪ್ರಜೆಗಳು ಖಂಡಿಸಬೇಕು. ಭದ್ರತಾ ವಿಫಲತೆಯು ಕ್ರಾಸ್ ಬಾರ್ಡರ್ ಟೆರರಿಸಂನ ಒಂದು ಭಾಗ. ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಪಾಕ್ ಜೊತೆ ಸೇರಿ ಈ ಕೃತ್ಯವನ್ನು ಪಂಜಾಬ್ ಸರಕಾರ ಮತ್ತು ಕಾಂಗ್ರೆಸ್‍ನವರು ಮಾಡಿದ್ದಾರೆ. ಇದರ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆ ಎಂದು ಆರೋಪಿಸಿದರು.
ಆರೋಪ ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು, ಪ್ರಧಾನಿ ಬರುವ ಮೊದಲು ಸರ್ವೇ ಮಾಡಿರ್ತಾರೆ. ಪಂಜಾಬ್ ಸಿಎಂ ರೈತರ ಮುಂದೆ ನಿಂತು ಮಾತನಾಡುವುದು ಅವಶ್ಯಕತೆ ಇತ್ತೇ. ಪ್ರಧಾನಿ ಬರುವಾಗ ಹೋರಾಟ, ಪ್ರತಿಭಟನೆಗೆ ಅವಕಾಶವಿಲ್ಲ. ಪಂಜಾಬ್‍ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ, ಮುಖ್ಯ ಕಾರ್ಯದರ್ಶಿ ಬರದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ದಲಿತರೊಬ್ಬರನ್ನು ಸಿಎಂ ಮಾಡಿ ಅವರಿಗೆ ಅಪವಾದ ಬರಲು ಈ ರೀತಿ ಕಾಂಗ್ರೆಸ್ ಮಾಡಿಸಿತೇ, ಕೇವಲ 3 ತಿಂಗಳಿಗೆ ಅಲ್ಲಿ ದಲಿತ ಸಿಎಂ ಮಾಡಿದ್ದೇಕೆ. ಕರ್ನಾಟಕದಲ್ಲಿ ಆರು ದಶಕದಿಂದ ದಲಿತ ಸಿಎಂ ಬೇಡಿಕೆ ಇದ್ದರೂ ಮಾಡಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಮಳೆ ಬಿದ್ದರೆ ಕಾಂಗ್ರೆಸ್ ಮುಖಂಡರು ಪಂಜಾಬ್‍ನಲ್ಲಿ ಕೊಡೆ ಹಿಡಿಯುತ್ತಾರೆ. ಇಂಥ ಭದ್ರತಾ ವಿಫಲತೆ ಯಾವತ್ತೂ ನಡೆದಿಲ್ಲ. ಕಾಂಗ್ರೆಸ್ ಇದರ ಬಗ್ಗೆ ಖುಷಿ ಪಡುತ್ತಿದೆ. ನಿಮಗೆ ಮೋದಿಯವರ ಬಗ್ಗೆ ದ್ವೇಷ ಇರಬಹುದು. ಈ ರೀತಿ ದ್ವೇಷ ಪಡುವುದು ಸರಿಯೇ? ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….