ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಹಾಗೂ ಎಂ.ವಿ.ಜೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ವಿಜಯ ಈ.ರವಿಕುಮಾರ್ ಅವರು ಭೇಟಿ ನೀಡಿ ಆಕ್ಸಿಜನ್ ಸಂಗ್ರಹಣೆ ಹಾಗೂ ಬೆಡ್ ಹಂಚಿಕೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಹೊಸಕೋಟೆ ನಗರದಲ್ಲಿರುವ ಕ್ಯಾತಿ ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಪರಿಶೀಲಿಸಿದರು.
ಪರಿಶೀಲನಾ ವೇಳೆ ಅಪರ ಜಿಲ್ಲಾಧಿಕಾರಿ ವಿಜಯ ಈ.ರವಿಕುಮಾರ್ ಅವರು ಮಾತನಾಡಿ, ಕೋವಿಡ್-19 ಮೂರನೇ ಅಲೆಯ ಮುನ್ಸೂಚನೆಯಿದ್ದು, ಕೋವಿಡ್ ಪರೀಕ್ಷೆಗಳ ಹೆಚ್ಚಳ ಮಾಡುವುದರ ಜೊತೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆಕ್ಸಿಜನ್ ಸರಬರಾಜು ಹಾಗೂ ಬೆಡ್ ಗಳ ಕೊರತೆಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಆಕ್ಸಿಜನ್ ಸಂಗ್ರಹಣೆ ಹಾಗೂ ಬೆಡ್ ಗಳ ಲಭ್ಯತೆ ಬಗ್ಗೆ ಅಧಿಕಾರಿಗಳು ಖಾತರಿ ಪಡಿಸಿಕೊಳ್ಳಬೇಕು. ಕೋವಿಡ್ ಲಸಿಕೆ ನೀಡುವ ವೇಗವನ್ನು ಮತ್ತಷ್ಟು ವೇಗಗೊಳಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಗಂಭೀರ ಎಂದು ಅಧಿಕಾರಿಗಳು ಪರಿಗಣಿಸಬೇಕು. ಹೋಮ್ ಐಸೋಲೇಷನ್ ನಲ್ಲಿರುವ ಕೋವಿಡ್ ಸೋಂಕಿತ ವ್ಯಕ್ತಿಗಳ ಚಲನವಲನ ಹಾಗೂ ಆರೋಗ್ಯದ ಸ್ಥಿತಿಗತಿ ಕುರಿತು ಪ್ರತಿದಿನ ತಪಾಸಣೆ ನಡೆಯಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ, ಹೊಸಕೋಟೆ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್, ಎಂ.ವಿ.ಜೆ ಆಸ್ಪತ್ರೆಯ ಅಧೀಕ್ಷಕ ವೈದ್ಯಾಧಿಕಾರಿ ಡಾ.ಪ್ರಮೋದ್, ಜಿಲ್ಲಾ ಸಕಾಲ ಸಂಯೋಜಕ ಮಹೇಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….