ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ಕಾರ್ಯ ಶೇ.100ರಷ್ಟು ಗುರಿ ಸಾಧಿಸುವ ಕುರಿತಂತೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು (ಜ.13) ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ಆದರೆ ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್ ಆತಂಕದ ನಡುವೆ ನಿಯಮ ಪಾಲಿಸಬೇಕಾದ ಅಧಿಕಾರಿಗಳೇ, ಕಿರಿದಾದ ಸಭಾಂಗಣದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಒಟ್ಟುಗೂಡಿ ಸಾಮಾಜಿಕ ಅಂತರವಿಲ್ಲದಂತೆ ಸಭೆ ನಡೆಸುವ ಮೂಲಕ ಕೋವಿಡ್ ನಿಯಮ ಗಾಳಿಗೆ ತೋರಿದ್ದು, ಕೋವಿಡ್ ಹರಡಿದರೆ ಪರಿಣಾಮವೇನು ಎಂಬ ಆತಂಕಕ್ಕೆ ಕಾರಣವಾಗಿದೆ.
ಉಳಿದಂತೆ ಸಭೆಯಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ತಹಶೀಲ್ದಾರ್ ಮೋಹನಕುಮಾರಿ, ಲಸಿಕೆ ವಿತರಣೆ ಕುರಿತು ಹೆಚ್ಚಿನ ಮಹತ್ವ ನೀಡುವುದಕ್ಕೆ ಒತ್ತು ನೀಡಬೇಕಿದೆ. ಮೊದಲ ಲಸಿಕೆ, ಎರಡನೇ ಲಸಿಕೆ, ನಿಗದಿತ ಶಾಲಾ ಮಕ್ಕಳಿಗೆ ಲಸಿಕೆ ಹಾಗೂ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ವಿತರಣೆಗೆ ಮಹತ್ವ ನೀಡಬೇಕಿದೆ ಎಂದರು.
ತಾಲೂಕಿನಲ್ಲಿ ಕೆಲ ಗ್ರಾಮಗಳಲ್ಲಿ ಮದ್ಯಪಾನ ಮಾಡುವವರು ಕೋವಿಡ್ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಪಿಡಿಒಗಳು, ಅರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸ್ಥಳೀಯ ಮುಖಂಡರ ಸಹಕಾರ ಪಡೆದ ಲಸಿಕೆ ನೀಡಬೇಕು.
ತಾಲೂಕಿನ 15 ರಿಂದ 18ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ಶೇ.100ರಷ್ಟು ವಿತರಣೆ ಮಾಡಬೇಕಿದೆ. ಮೆಳೇಕೋಟೆ, ಸಾಸಲು, ದೊಡ್ಡತುಮಕೂರಿನಲ್ಲಿ ಕಡಿಮೆ ಗುರಿ ಸಾಧಿಸಿದ್ದು ಶಾಲೆಗಳು ರಜೆ ಘೋಷಣೆಯಾದರೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಟ್ಟಿಪಡೆದು ಲಸಿಕೆ ನೀಡುವುದು ಹಾಗೂ ಶಾಲೆಗೆ ಬಾರದವರಿಗೆ ಗ್ರಾಮಪಂಚಾಯಿತಿ ಪಿಡಿಒ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಬೇಕೆಂದರು.
ರಾಜ್ಯದಲ್ಲಿ ಪಾಸಿಟಿವಿಟಿ ದರದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಸೋಂಕು ತಡೆಗಟ್ಟಲು ಹೆಚ್ಚು ತಪಾಸಣೆ ನಡೆಸಲು ಅಧಿಕಾರಿಗಳ ಸಹಕಾರ ಅಗತ್ಯವೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಮೋಹನ್, ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಬಿಇಒ ಶುಭಮಂಗಳ, ಸಿಡಿಪಿಒ ಅನಿತಾಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….