ಬೆಂ.ಗ್ರಾ.ಜಿಲ್ಲೆ: ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಪ್ರತಿಯೊಬ್ಬ ಪ್ರಜೆಗಳಿಗೆ ಪ್ರಜಾಪ್ರಭುತ್ವ ನೀಡಿರುವ ಅತ್ಯಮೂಲ್ಯವಾದ ಹಕ್ಕು ಮತದಾನವಾಗಿದ್ದು, 18 ವರ್ಷ ವಯಸ್ಸು ಪೂರೈಸಿದ ಯುವಜನತೆ ಮತದಾನಕ್ಕೆ ನೋಂದಣಿ ಮಾಡಿಸಿ, ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನಮೂದಾಗಿರುವ ಕುರಿತು ಖಾತರಿಪಡಿಸಿಕೊಂಡು, ಜವಾಬ್ದಾರಿಯುತ ನಾಗರೀಕರಾಗಿ ಚುನಾವಣೆಯ ವೇಳೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರುವ ತಂತ್ರಜ್ಞಾನ ಆಧಾರಿತ ಬದಲಾವಣೆಯು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರಲ್ಲದೆ, ಪ್ರತಿ ಚುನಾವಣೆಯಲ್ಲಿ ಜವಾಬ್ದಾರಿಯುತ ಮತದಾರರಾಗಿ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸಿದರು.
ಮತದಾನವನ್ನು ಖಾತ್ರಿ ಪಡಿಸುವ ಯಂತ್ರ (ವಿವಿ ಪ್ಯಾಟ್)ದಲ್ಲಿ ಮತದಾರರು ಹಾಕಿದ ಮತವನ್ನು ವೀಕ್ಷಿಸಲು ಅವಕಾಶವಿದ್ದು, ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು ಆಗಿರುವುದರಿಂದ, ಮತದಾನ ಮಾಡುವ ಮೂಲಕ ಸೂಕ್ತ ಆಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣ್ಣಪ್ಪ ಅವರು ಸ್ವೀಪ್ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಅವರು ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ ಉತ್ತಮ ಬಿ.ಎಲ್.ಓ ಮತ್ತು ಇ.ಎಲ್.ಸಿ ಗಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.
ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು ಹಾಗೂ ರಾಜ್ಯ ಮಟ್ಟದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ತೃತೀಯ ಸ್ಥಾನ ಪಡೆದ ಲಾವಣ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೃತಿಕ್ ಅವರನ್ನು ಅಭಿನಂದಿಸಲಾಯಿತು.
ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿಗೆ ಅಭಿನಂದನೆ ಪ್ರಮಾಣ ಪತ್ರ ನೀಡಲಾಯಿತು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಬಿ.ವಿ.ನರಸಿಂಹರೆಡ್ಡಿ, ವಿದ್ಯಾರ್ಥಿಗಳಾದ ಸವಿತತಾಪ, ಕೌಶಲ್ಯ, ಅನುಪಮ, ದಿವ್ಯ ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಶಿರಸ್ತೇದಾರ್ ಪಿ.ಎಸ್.ಆರ್.ಪ್ರಸಾದ್, ಶಿಕ್ಷಣ ಇಲಾಖೆಯ ಸ್ವೀಪ್ ನೋಡಲ್ ಅಧಿಕಾರಿ ಶ್ರೀಕಂಠಯ್ಯ ಸೇರಿದಂತೆ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….