ಚಿತ್ರದುರ್ಗ, (ಆಗಸ್ಟ್.04): ಇಲ್ಲಿನ ಕವಾಡಿಗರಹಟ್ಟಿಯಲ್ಲಿ ಶುಕ್ರವಾರ ವರದಿಯಾದ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 36 ರಿಂದ 149ಕ್ಕೆ ಏರಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ವಾಂತಿ ಭೇದಿಯಿಂದ ಬಳಲುತ್ತಿದ್ದ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ಕವಾಡಿಗರಹಟ್ಟಿಯ ರುದ್ರಪ್ಪ (50ವರ್ಷ) ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ.
ಕಲುಷಿತ ನೀರು ಸೇವನೆ ಪ್ರಕರಣವು ಜುಲೈ 31ರಂದು ವರದಿಯಾಗಿತ್ತು. ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ನಿವಾಸಿಗಳಾದ ಮಂಜುಳಾ (23) ಮತ್ತು ರಘು (27) ಎಂಬುವವರು ಸಾವಿಗೀಡಾಗಿದ್ದಾರೆ. ಕಲುಷಿತ ನೀರು ಸೇವಿಸಿ 36 ಮಂದಿ ಅಸ್ವಸ್ಥರಾಗಿದ್ದು, ಜುಲೈ 30ರಂದು ಗ್ರಾಮಕ್ಕೆ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದ ಪ್ರವೀಣ್, ಮರುದಿನ ವಡ್ಡರಸಿದ್ದನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.
115 ಮಂದಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, 34 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೀರಿನ ಮಾದರಿಯಲ್ಲಿ ಯಾವುದೇ ವಿಷಕಾರಿ ರಾಸಾಯನಿಕ ಪತ್ತೆಯಾಗಿಲ್ಲ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ. ಸ್ಥಳೀಯರೊಬ್ಬರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾದ ಬಳಿಕ ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿರಬಹುದು ಎಂದು ಆರೋಪಿಸಲಾಗಿದೆ. ಆದರೆ, ನೀರು ಕಲುಷಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಎಇಇ ಆರ್. ಮಂಜುನಾಥ ಗಿರಡ್ಡಿ ಮತ್ತು ಜೆಇ ಎಸ್.ಆರ್. ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಲು ಅಧಿಕಾರಿಗಳು ಶಿಫಾರಸು ಮಾಡಿ ವರದಿ ಕಳುಹಿಸಿದ್ದಾರೆ. ಕವಾಡಿಗರಹಟ್ಟಿಯಲ್ಲಿ ವಾಲ್ವ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಿ.ಹೆಚ್.ಪ್ರಕಾಶ್ ಬಾಬು ಅವರನ್ನೂ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….