ಈ ವರ್ಷ ಗೌರಿ ಗಣೇಶ ಹಬ್ಬವನ್ನು 2023 ರ ಸೆಪ್ಟೆಂಬರ್ 18 ರಿಂದ 10 ದಿನಗಳ ಕಾಲ ಆಚರಿಸಲಾಗುತ್ತಿದೆ. ಹಿಂದೂ ಧರ್ಮದ ಅತ್ಯಂತ ಮಂಗಳಕರವಾದ ಹಬ್ಬದಲ್ಲಿ ಗಣೇಶ ಚತುರ್ಥಿಯೂ ಒಂದು.
ಗೌರಿ ಹಬ್ಬ: ಗಣೇಶ ಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ ಗೌರಿ ಹಬ್ಬವನ್ನು ಆಚರಿಸಲಾಗುವುದು. ಭಾದ್ರಪದ ಮಾಸದ ಶುದ್ಧ ತದಿಗೆ ದಿನ ಗೌರಿ ಪೂಜೆಯನ್ನು ಮಾಡಲಾಗುವುದು. ಆದರೆ ಈ ವರ್ಷ ಎರಡು ಹಬ್ಬಗಳು ಒಂದೇ ದಿನ ಇದೆ.
ಗೌರಿ ದೇವಿ ಪ್ರಕೃತಿಯ ಸ್ವರೂಪ. ಪಾರ್ವತಿ ದೇವಿಯ ಅಪರಾವತಾರ. ಕುಟುಂಬದ ಸಂತೋಷ, ಸಮೃದ್ಧಿ ಹೆಚ್ಚಿಸಲಿ, ನಮಗೆ ಶಕ್ತಿಯನ್ನು ನೀಡಲಿ ಎಂದು ಶ್ರದ್ಧೆ-ಭಕ್ತಿಯಿಂದ ಗೌರಿಯನ್ನು ಪೂಜಿಸಲಾಗುವುದು. ಗೌರಿ ಹಬ್ಬವನ್ನು ಸುವರ್ಣ ಗೌರಿ ಹಬ್ಬವೆಂದು ಕರೆಯಲಾಗುವುದು.
ಈ ವರ್ಷ ಸ್ವರ್ಣ ಗೌರೀ ಹಬ್ಬ ಯಾವಾಗ, ಪೂಜಾ ಮುಹೂರ್ತ, ಪೂಜಾ ವಿಧಿ ಇವುಗಳ ಬಗ್ಗೆ ತಿಳಿಯೋಣ: ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬವನ್ನು ಆಚರಿಸಲಾಗುವುದು.
ಗೌರೀ ಹಬ್ಬದಲ್ಲಿ 16 ಗಂಟಿನ ದಾರದ ಮಹತ್ವ: ಈ ವ್ರತವನ್ನು ಮುತ್ತೈದೆಯರು 16 ವರ್ಷ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಗೌರೀ ದೇವಿ ಶಿವನನ್ನು ಒಲಿಸಿಕೊಳ್ಳಲು ಬರೀ ಹಣ್ಣುಗಳನ್ನು ಮಾತ್ರ ಸೇವಿಸುತ್ತಾ 16 ವರ್ಷ ತಪಸ್ಸು ಮಾಡಿದಳು ಎಂಬ ಪೌರಾಣಿಕ ಕತೆಯಿದೆ. ಗೌರಿಯ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾದ.
ಗೌರಿ ಹಬ್ಬದಂದು 16 ಗಂಟುಗಳ ಗೌರಿದಾರವನ್ನು ಬಲ ಮಣಿಕಟ್ಟಿಗೆ ಧರಿಸಲಾಗುವುದು. ಇದರಿಂದ ಗೌರಿಯ ಆಶೀರ್ವಾದ ಸಿಗುತ್ತದೆ.
ಗೌರಿ ಹಬ್ಬಕ್ಕೆ ಬಾಗಿನ: ಗೌರಿ ಹಬ್ಬಕ್ಕೆ ಕನಿಷ್ಠ 5 ಬಾಗಿನಗಳನ್ನು ತಯಾರಿಸಲಾಗುವುದು. ಈ ಬಾಗಿನದಲ್ಲಿ ಸಾಮಾನ್ಯವಾಗಿ ಅರಿಶಿಣ-ಕುಂಕುಮ, ಕಪ್ಪು ಬಳೆಗಳು, ಕಪ್ಪು ಮಣಿಗಳು, ಒಂದು ಬಾಚಣಿಗೆ, ಒಂದು ಚಿಕ್ಕ ಕನ್ನಡಿ, ಬಳೆ, ತೆಂಗಿನಕಾಯಿ, ಬ್ಲೌಸ್ ಪೀಸ್, ಧಾನ್ಯ, ಅಕ್ಕಿ, ಹಣ್ಣುಗಳಿರಬೇಕು. ಬಾಗಿನವನ್ನು ಮೊರದಲ್ಲಿ ನೀಡಬೇಕು. ತಯಾರು ಮಾಡಿದ ಬಾಗಿನದಲ್ಲಿ ಒಂದು ಬಾಗಿನವನ್ನು ಗೌರೀ ದೇವಿಗೆ ಇಟ್ಟು ನಂತರ ನಂತರ ಉಳಿದವುಗಳನ್ನು ಹಬ್ಬಕ್ಕೆ ಬಂದ ಮುತ್ತೈದೆಯರಿಗೆ ನೀಡಲಾಗುವುದು.
ಗೌರೀ ವ್ರತ: ಮನೆಯ ಹೆಂಗಸರು, ಹೆಣ್ಣು ಮಕ್ಕಳು ಗೌರಿ ಹಬ್ಬದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಲಕ್ಷ್ಮಿಯಂತೆ ಅಲಂಕರಿಸಿಕೊಂಡು ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ನಂತರ ಮನೆಯಲ್ಲಿ ಗೌರಿ ಪೂಜೆಯನ್ನು ಮಾಡುತ್ತಾರೆ. ಈ ದಿನ ಉಪವಾಸವಿದ್ದು ಗೌರಿ ವ್ರತವನ್ನು ಆಚರಿಸಲಾಗುವುದು.
ಸ್ವರ್ಣ ಗೌರಿ ವ್ರತವನ್ನು ಮಾಡುವವರಿಗೆ ಗೌರಿಯು ಸಕಲ ಸೌಭಾಗ್ಯ ನೀಡಿ ಸಲಹುತ್ತಾಳೆ ಎಂಬುವುದು ಅವಳ ಭಕ್ತರ ಅಚಲ ನಂಬಿಕೆ.
ಗಣೇಶ ಚತುರ್ಥಿ: ಗಣೇಶ ಚತುರ್ಥಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಗಣೇಶ ಚತುರ್ದಶಿ, ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿ ಎಂದು ಕರೆಯಲ್ಪಡುವ ಈ ಹಬ್ಬವು ದೇಶದ ಪ್ರಮುಖ ರಜಾದಿನಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಈ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸುತ್ತದೆ.
ಈ ವರ್ಷ, ಇದು ಸೆಪ್ಟೆಂಬರ್ 18 ರಿಂದ 28 ರವರೆಗೆ ನಡೆಯಲಿದೆ. ಕೆಲವೆಡೆ ಸೆಪ್ಟೆಂಬರ್ 19 ರಿಂದ ಕೂಡ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಗಣೇಶನ ಜನ್ಮವನ್ನು ಸುಂದರವಾಗಿ ಸ್ಮರಿಸುತ್ತದೆ ಮತ್ತು ಜನರು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಶುಭ ಫಲಕ್ಕಾಗಿ ಗಣೇಶನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.
ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು ಮರಾಠ ರಾಜ ಶಿವಾಜಿ ಮಹಾರಾಜರು ಜನಪ್ರಿಯಗೊಳಿಸಿದರು ಎನ್ನಲಾಗುತ್ತದೆ. ಅವರು ತಮ್ಮ ಜನರನ್ನು ಒಗ್ಗೂಡಿಸಲು ಮತ್ತು ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸಲು ಈ ಹಬ್ಬವನ್ನು ಬಳಸಿದರು.
ಆರಂಭದಲ್ಲಿ ಇದನ್ನು ಮಹಾರಾಷ್ಟ್ರದಲ್ಲಿ ಮಾತ್ರ ಆಚರಿಸಲಾಯಿತು ಆದರೆ ನಂತರ ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಗೆ ಹರಡಿತು. ಭಾರತ, ನೇಪಾಳ, ಮಾರಿಷಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈಗ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.
ವಿಶೇಷ ವರದಿ: ಗಣೇಶ್. ಎಸ್.,ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….