ಹುಬ್ಬಳ್ಳಿ, (ಸೆ.18): ಕೆಲವು ಕಡೆ ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ ಅನ್ನೋ ಊಹಾಪೋಹಗಳಿವೆ. ಕೆಲವು ಕಡೆ ಸುದ್ದಿ ಹೊರಗೆ ಬರ್ತಿದೆ, ಕೆಲವು ಕಡೆ ಹೊರಗೆ ಬರ್ತಿಲ್ಲ. ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ”ಹಣ ಪಡೆದ ಬಗ್ಗೆ ಕೆಲವು ಕಡೆ ಸುದ್ದಿ ಹೊರಗೆ ಬರುತ್ತಿವೆ, ಇನ್ನೂ ಕೆಲವೆಡೆ ಹೊರಗೆ ಬರುತ್ತಿಲ್ಲ. ಟಿಕೆಟ್ ಕೊಡಿಸಲು ಇಂಥದ್ದೊಂದು ಟೀಮ್ ರೆಡಿಯಾಗಿದೆ ಅಂದರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು. ಮಾಹಿತಿ ಪ್ರಕಾರ ಹಿಂದೂ ಕಾರ್ಯಕರ್ತರೇ ಪ್ರಕರಣದಲ್ಲಿದ್ದಾರೆ. ಕನಕಗಿರಿಯಲ್ಲಿ ಟಿಕೆಟ್ ಡೀಲ್ ವಿಷಯಕ್ಕೆ ದೂರು ದಾಖಲಾಗಿದೆ. ದೂರು ಕೊಡದೆ ಇರುವವರು ಇನ್ನೂ ಸಾಕಷ್ಟು ಜನ ಇರಬಹುದು?” ಎಂದು ಕೇಳಿದರು.
”ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಎಂದು ನಾನು ಹೇಳಿದ್ದೆ. ಅದು ಈಗ ಪ್ರೂವ್ ಆಗುತ್ತಿದೆ. ವ್ಯಕ್ತಿಯನ್ನು ನೋಡಿ ಟಿಕೆಟ್ ಕೊಡುವ ಪ್ರಕ್ರಿಯೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡುತ್ತಾರೆ. ಏನೋ ವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ” ಎಂದು ಹೇಳಿದರು.
”ಪ್ರಾಥಮಿಕ ಹಂತದಲ್ಲಿ ವ್ಯವಹಾರ ನಡೆದಿರುವ ಬಗ್ಗೆ ಸಾಬೀತಾಗಿದೆ. ಚೈತ್ರಾ ಕುಂದಾಪೂರ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಚೈತ್ರಾ ಕುಂದಾಪೂರ ಪ್ರಕರಣ ಹೊರಬರುತ್ತಿದ್ದಂತೆ ಕೆಲವರಿಗೆ ಧೈರ್ಯ ಬಂದಿದೆ” ಎಂದರು.
ಈದ್ಗಾ ಮೈದಾನದ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ವಿರುದ್ದವೂ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದ ವಿಚಾರವಾಗಿ ಮಾತನಾಡಿದ ಅವರು, ”ಬಿಜೆಪಿಗೆ ನಾನು ಅಂದರೆ ಭಯ. ನಾನು ಪಕ್ಷ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ. ಅದನ್ನು ಇನ್ನೂ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗಿಲ್ಲ” ಎಂದು ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….