ದೊಡ್ಡಬಳ್ಳಾಪುರ: ಸೆಪ್ಟೆಂಬರ್ 18. ಇದು ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಪಾಲಿಗೆ ಹರ್ಷದ ದಿನ. ಯಾಕೆಂದರೆ, ಇಂದು (ಸೆ.18) ವಿಷ್ಣುವರ್ಧನ್ ಅವರ ಜನ್ಮದಿನ. ಹೀಗಾಗಿ ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬ ವರ್ಗ, ಅಭಿಮಾನಿವರ್ಗ ಪ್ರೀತಿಯಿಂದ ಅದ್ಧೂರಿಯಾಗಿ ಆಚರಿಸುತ್ತಿದೆ.
ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್. ‘ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ’ ಅಂತಲೇ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು. ಇಂತಿಪ್ಪ ಡಾ.ವಿಷ್ಣುವರ್ಧನ್ ಅವರ ಜನ್ಮದಿನೋತ್ಸವ ಇಂದು.
ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 73ನೇ ಜನ್ಮದಿನವನ್ನು ಇಂದು ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಡಾ.ವಿಷ್ಣುವರ್ಧನ್ ಇಂದು ನಮ್ಮ ಜೊತೆ ಇಲ್ಲ. ದೈಹಿಕವಾಗಿ ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಡಾ.ವಿಷ್ಣುವರ್ಧನ್ ಅಜರಾಮರ.
ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಕುಟುಂಬಸ್ಥರು ‘ಸಿರಿವಂತ’ನಿಗೆ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದ್ದಾರೆ.
ಅಂತೆಯೇ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿರುವ ಡಾ.ವಿಷ್ಣುವರ್ಧನ್ ಪುತ್ಥಳಿ ಬಳಿ ವಿಷ್ಟು ಸೇನಾ ಸಮಿತಿ, ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಭಾರ್ಗಾವ, ಉಪಾಧ್ಯಕ್ಷ ನಾಗೇಶ್.ಪಿ., ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಅರುಣ್, ಸಂಘಟನಾ ಕಾರ್ಯದರ್ಶಿಗಳಾದ ಮುನ್ನಾ, ಅಂಜಿನಪ್ಪ, ಸಂಚಾಲಕರು ಕುಮಾರ್, ಸಹ ಕಾರ್ಯದರ್ಶಿ ರಾಮಾಂಜಿನಪ್ಪ, ತಾತಯ್ಯ ಹರೀಶ್, ಡಾ.ವಿಷ್ಣು ಯುವ ಸೇನೆ ಅಭಿಮಾನಿ ಬಳಗದ ಅಧ್ಯಕ್ಷ ವಿಜಯ್ ಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….