ದೊಡ್ಡಬಳ್ಳಾಪುರ, (ಅ.13): ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಬೇಕು ಎಂದು ಕನ್ನಡಪರ ಸಂಘಟನೆಯ ಮುಖಂಡರು ಒತ್ತಾಯಿಸಿದ ಘಟನೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂಡುಬಂತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ವಾಲ್ಮೀಕಿ ಜಯಂತಿಗಳ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಬೇಕು, ಈ ಕುರಿತಂತೆ ಅಧಿಕಾರಿಗಳು ತ್ವರಿತ ಕ್ರಮಕೈಗೊಳ್ಳಬೇಕಿದೆ ಎಂದರು.
ಕನ್ನಡ ಶಾಲೆಗಳು ಮುಚ್ಚದಂತೆ ಕ್ರಮ ವಹಿಸಬೇಕು. ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ, ಪ್ರಬಂಧ ರಸಪ್ರಶ್ನೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಬೇಕು. ಸಮಾರಂಭದಲ್ಲಿ ಅತಿಥಿಗಳಿಗೆ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ವಾಲ್ಮೀಕಿ ಜಯಂತಿಗಳನ್ನು ಮೂರು ವರ್ಷಗಳಿಂದ ಸರಳವಾಗಿ ಆಚರಣೆ ಮಾಡುತ್ತಿದ್ದು, ಈ ಬಾರಿ ಅದ್ದೂರಿಯಾಗಿ ಆಚರಿಸಬೇಕು. ಮಹನೀಯರ ಜಯಂತಿ ಆಚರಣೆಗಳು ಕಾಟಾಚಾರದಂತೆ ನಡೆಸಬಾರದು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಅಲ್ಲದೆ ಸನ್ಮಾನಕ್ಕೆ ಕನ್ನಡಪರ ಹೋರಾಟಗಾರರೊಂದಿಗೆ ರೈತರನ್ನು , ಮಹಿಳೆಯರನ್ನು ಗುರುತಿಸಬೇಕು ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ನಂತರ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಫೇಸ್ ಬುಕ್, ವ್ಯಾಟ್ಸ್ ಆ್ಯಪ್ ಅಂತರ್ಜಾಲವನ್ನು ಬಳಸುವ ಮೂಲಕ ಮೊಬೈಲ್‍ಗಳನ್ನು ಹೆಚ್ಚಾಗಿ ಬಳಸುತ್ತಿರುವ ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಕನ್ನಡದ ಮಹತ್ವದ ಬಗ್ಗೆ, ಹೋರಾಟಗಾರರ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ಕನ್ನಡ ರಾಜ್ಯೋತ್ಸವದ ಆಚರಣೆ ಇದಕ್ಕೆ ಉತ್ತಮ ವೇದಿಕೆಯಾಗಬೇಕಿದೆ ಎಂದರು.
ಕನ್ನಡ ನಾಮಫಲಕ ಕಡ್ಡಾಯ ಕುರಿತಂತೆ ಈಗಾಗಲೇ ಕ್ರಮ ವಹಿಸುವಂತೆ ತಾಲೂಕು ಪಂಚಾಯಿತಿಗೆ ಹಾಗೂ ನಗರಸಭೆಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಮ್ಮ ಅನುದಾನದ ಪರಿಮಿತಿಯಲ್ಲಿ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಖಂಡರು ಬಯಸಿದರೆ, ಸಮುದಾಯದಿಂದಲೇ ಅದ್ದೂರಿಯಾಗಿ ಆಚರಿಸಬಹುದಾಗಿದೆ. ಹಿಂದೆ ಆಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಕೆ.ಪರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….