ಗೌರಿಬಿದನೂರು, (ನ.26): ತಾಲೂಕಿನ ಮಂಚೇನಹಳ್ಳಿ ಸುತ್ತಮುತ್ತ ಬೆಳೆಯುವ ಯಾಲಕ್ಕಿ ಬಾಳೆಹಣ್ಣುಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಇಲ್ಲಿ ಬೆಳೆಯುವ ಯಾಲಕ್ಕಿ ಬಾಳೆ ರುಚಿ ಹಾಗೂ ಗುಣಮಟ್ಟಕ್ಕೆ ಖ್ಯಾತಿ ಪಡೆದಿದೆ.
ರೈತರ ಬಾಳೆತೋಟಗಳಲ್ಲೇ ಕೆಜಿ ಬಾಳೆಗೊನೆಗೆ 60 ರುಪಾಯಿಯಿಂದ 80 ರುಪಾಯಿ ಬೆಲೆ ಇದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಯಾಲಕ್ಕಿ ಬಾಳೆ ಹಣ್ಣಿಗೆ 90 ರುಪಾಯಿಯಿಂದ 120 ರುಪಾಯಿ ಬೆಲೆ ಇದೆ.
ಇದರಿಂದ ಕಳ್ಳರು ರೈತರು ಬೆಳೆದ ಬಾಳೆತೋಟಕ್ಕೆ ನುಗ್ಗಿ ರಾತ್ರೋರಾತ್ರಿ ಬಾಳೆಗೊನೆಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಈ ಆತಂಕದಿಂದ ರೈತರು ರಾತ್ರಿ ವೇಳೆ ತೋಟ ಕಾಯುವ ಸ್ಥಿತಿ ಉಂಟಾಗಿದೆ.
ತಾಲ್ಲೂಕಿನ ಜಿ.ಬೊಮ್ಮಸಂದ್ರ ಗ್ರಾಮದ ರೈತ ಪದ್ಮನಾಭಯ್ಯನವರಿಗೆ ಸೇರಿದ ಬಾಳೆ ತೋಟದಲ್ಲಿ ಬೆಳೆದ ಬಾಳೆ ಕಳ್ಳರ ಪಾಲಾಗಿದೆ. ಅವರು ಒಂದೂವರೆ ಎಕರೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಬಂಡವಾಳ ಹಾಕಿ ಯಾಲಕ್ಕಿ ಬಾಳೆ ಬೆಳೆದಿದ್ದಾರೆ. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಸುಮಾರು ಒಂದೂ ಕಾಲು ಲಕ್ಷ ರುಪಾಯಿಗಳ ಮೌಲ್ಯದ ಬಾಳೆಕಾಯಿಯ ಬಾಳೆಗೊನೆಗಳನ್ನು ಕಳ್ಳರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹಗಲು-ರಾತ್ರಿ ಕಷ್ಟಪಟ್ಟು ವರ್ಷವಿಡೀ ರೈತ ಯಾಲಕ್ಕಿ ಬಾಳೆ ಬೆಳೆದಿದ್ದಾನೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಂತು ಎನ್ನುವಷ್ಟರಲ್ಲಿ ಕಿಡಿಗೇಡಿ ಕಳ್ಳರು ಹುಲುಸಾದ ಬಾಳೆ ಕದ್ದಿದ್ದಾರೆ.
ಇದರಿಂದ ನೊಂದಿರುವ ರೈತ ಪದ್ಮನಾಭ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….