ಹೊಸದಿಲ್ಲಿ, (ಫೆ.13): ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಪ್ರತೀ ರೈತರಿಗೆ ಬೆಳೆಗಳ ಮೇಲೆ ಕನಿಷ್ಠ ಬೆಂಬಲ ಬೆಲೆ (MSP) ಯ ಕಾನೂನುಬದ್ಧ ಖಾತರಿಯನ್ನು ಕಾಂಗ್ರೆಸ್ ನೀಡುತ್ತದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವಿಟ್ ಮಾಡಿರುವ ಅವರು, ರೈತ ಬಂಧುಗಳೇ, ಇಂದು ಐತಿಹಾಸಿಕ ದಿನ ! ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್‌ಪಿ ಕಾನೂನುಬದ್ಧ ಗ್ಯಾರಂಟಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಖಾತರಿಪಡಿಸುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತದೆ. ಇದು ಮೊದಲ ಭರವಸೆಯಾಗಿದೆ. ಕಾಂಗ್ರೆಸ್ ನ್ಯಾಯದ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.
ಬೆಳೆ ಬೆಲೆಗೆ ಬೇಡಿಕೆಯಿಡಲು ದೆಹಲಿಯತ್ತ ಸಾಗುತ್ತಿರುವ ರೈತರ ಮೇಲೆ ಮಂಗಳವಾರ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ಹಲವಾರು ರೈತರನ್ನು ಬಂಧಿಸಿದರು ಮತ್ತು ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ತಡೆಯಲು ಗಡಿಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇದರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇಂದು ರೈತರು ದೆಹಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರನ್ನು ತಡೆಯಲಾಗುತ್ತಿದೆ. ಅವರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಲಾಗುತ್ತಿದೆ. ಅವರು ಕೇಳುತ್ತಿರುವುದು ಕೇವಲ ಅವರ ಶ್ರಮಕ್ಕೆ ಪ್ರತಿಫಲವನ್ನಷ್ಟೇ ಬಿಜೆಪಿ ಸರ್ಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತರತ್ನ ಘೋಷಿಸಿತು. ಆದರೆ ಅವರು ಹೇಳಿದ್ದನ್ನು ಜಾರಿಗೆ ತರಲು ಅವರು ಸಿದ್ದರಿಲ್ಲ ಎಂದು ದೂರಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….