ಬೆಂಗಳೂರು, (ಫೆ.13); ವಿಧಾನಸಭೆ ಫಲಿತಾಂಶ ಹೊರಬಂದ ಬಳಿಕ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಆ ಕಾರಣವೇ ಪಕ್ಷದ ಕಾರ್ಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ.
ಇದರ ಬೆನ್ನಲ್ಲೇ ಸೋಮಶೇಖರ್ ಅವರು ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರ ಮಾಡುವ ಮೂಲಕ ಕಮಲ-ದಳ ನಾಯಕರ ಶಾಕ್ ನೀಡಿದ್ದಾರೆ.
ಹೌದು ಸೋಮವಾರದಂದು ತಮ್ಮ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರವಾಗಿ ಮತಯಾಚಿಸಿದ್ದಾರೆ. ಇನ್ನೂ ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಗೆ ಗೈರಾಗಿದ್ದರು. ಈ ಎಲ್ಲಾ ಅಂಶಗಳಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಟಿ ಸೋಮಶೇಖರ್, ಈ ಹಿಂದೆ ಎ.ಪಿ.ರಂಗನಾಥ್ ( ಹಾಲಿ ಕಮಲ-ದಳಮೈತ್ರಿ ಅಭ್ಯರ್ಥಿ) ನಮ್ಮ ವಿರುದ್ಧವೇ ಪ್ರಚಾರ ಮಾಡಿದ್ದರು. ಅಶ್ವತ್ಥ್ ನಾರಾಯಣ್ ಸೇರಿದಂತೆ ವಿಜಯೇಂದ್ರ, ಬಿಎಸ್ವೈ ವಿರುದ್ಧವೇ ವಿರುದ್ಧ ಪ್ರಚಾರ ಮಾಡಿದ್ದರು. ನಮಗೆ ಸ್ವಾಭಿಮಾನ ಇಲ್ವಾ.. ?ಅಂತಹವರ ಪರ ನಾವು ಮಾತನಾಡಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇದೇ ವೇಳೆ ಎಪಿ ರಂಗನಾಥ್ ಅವರು ತಮ್ಮ ವಿರುದ್ಧ ಪ್ರಚಾರ ಮಾಡಿದ್ದ ವಿಡಿಯೋವನ್ನು ಸಹ ಬಹಿರಂಗಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನ್ನ ಕಚೇರಿಯಲ್ಲಿ ಸಭೆ ಮಾಡುತ್ತಿದ್ದೆ. ಆಗ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬರಬಹುದಾ ಅಂದ್ರು, ಬಾ ಅಂತ ಹೇಳಿದೆ. ಸಭೆಯಲ್ಲಿ ನನ್ನ ಪರ ಅಪ್ರೋಚ್ ಮಾಡಿ ಎಂದು ಪುಟ್ಟಣ್ಣ ಹೇಳಿದರು. ಆಗ ಸಭೆಗೆ ಬಂದಿದ್ದವರಿಗೆ ಮತ ಹಾಕಲು ಹೇಳಿದೆ.
ಬಿಜೆಪಿಗರು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ನನ್ನನ್ನು ಕರೆದಿಲ್ಲ. ಪುಟ್ಟಣ್ಣ ಕೇಳಿದ್ರು, ಹಾಗಾಗಿ ಮತ ಹಾಕಲು ಕೇಳಿಕೊಂಡೆ ತಪ್ಪೇನು? ಪಕ್ಷ ವಿರೋಧಿ ಅಂತಾದ್ರೂ ಅಂದುಕೊಳ್ಳಲಿ, ಏನಾದ್ರೂ ಅಂದುಕೊಳ್ಳಲಿ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡರು.
ನಾನೂ ಬಿಜೆಪಿಯ ಎಂಎಲ್ಎ, ಎರಡು ಸಲ ನನ್ನ ಕ್ಷೇತ್ರಕ್ಕೆ ಎಪಿ ರಂಗನಾಥ ಬಂದಿದ್ದಾನೆ. ಕರ್ಟಿಸಿಗಾದರೂ ಅವರು ನನ್ನ ಕರೆಯಲಿಲ್ಲ. ನೀವು ಪಕ್ಷ ವಿರೋಧಿ ಚಟುವಟಿಕೆ ಅಂತಿರಾ, ನನಗೂ ಸ್ವಾಭಿಮಾನ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….