ನಮ್ಮ ದೇಶದ ಹಾಗೂ ಕನ್ನಡ ನಾಡಿನ ದುರಂತ ಏನೆಂದರೆ ಪಾರಂಪರಿಕ ತಾಣಗಳ ಮತ್ತು ವಸ್ತುಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದ ಅವಿವೇಕಿಗಳಿಗೆ ಮತದಾನ ಮಾಡಿ ಗೆಲ್ಲಿಸಿರುವುದು.
ಮುಂದಿನ ಪೀಳಿಗೆಗೆ ಈ ನಾಡಿನ ಪಾರಂಪರಿಕ ಕಟ್ಟಡಗಳು ಸ್ಥಳಗಳು ಅವುಗಳನ್ನು ನಿರ್ಮಾಣದ ಹಿಂದಿನ ರೋಚಕ ವಿಚಾರಗಳನ್ನು ಸಂಗತಿಗಳನ್ನು ತಿಳಿಸಲು ಸಾಧ್ಯವಾಗದಂತಹ ಸ್ಥಿತಿ ಸೃಷ್ಟಿಸುತ್ತಿದ್ದಾರೆ.
ಕುಡಿದು ಇಸ್ಪೀಟ್ ಆಡಿ ಮಜಾ ಮಾಡಲು ಬೇರೆ ಸ್ಥಳಗಳು ದೊರೆಯುವುದಿಲ್ಲವೇ, ಇವರೆಲ್ಲರೂ ಯಾವ ಮಹತ್ಸಾಧನೆ ಮಾಡಿ ಯಾವ ಮೌಲ್ಯಗಳನ್ನು ಯುವ ಜನರಿಗೆ ಕಲಿಸುತ್ತಿದ್ದಾರೆ, ಸದನದ ಗೌರವವನ್ನಂತೂ ಹಾಳು ಮಾಡಿದ್ದಾಯಿತು ಸರ್ವ ಜನರ ಪ್ರಾತಿನಿಧಿಕ ವೇದಿಕೆಯ ಮಾನ ಕಳೆದದ್ದಾಯಿತು. ಇನ್ನು ಮುಂದಾದರೂ ಜನ ಎಚ್ಚೆತ್ತುಕೊಂಡು ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಜನಸೇವಕರನ್ನು ( ಜನ ನಾಯಕರನ್ನಲ್ಲ) ಆಯ್ಕೆ ಮಾಡಿಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಪ್ರಮಾಣ ಪತ್ರಗಳಿಗಿಂತ ಸಾಮಾನ್ಯ ಜ್ಞಾನದ ಪಾಠವನ್ನು ಕಲಿಯಬೇಕಿದೆ.
ರಾಜಕೀಯ ಜನಜೀವನದ ಒಂದು ಭಾಗವಾಗಬೇಕು ಅದು ಜನರ ನಿಯಂತ್ರಣದಲ್ಲಿ ಇರಬೇಕು ಬದಲಾಗಿ ಜಾತಿ ಧರ್ಮ ಮಠ ಖದೀಮರ ಅಂಕುಶಕ್ಕೆ ಸಿಲುಕಿದರೆ ಪ್ರಜೆಗಳು ಪ್ರಭುಗಳಾಗುವ ಬದಲು ಬಾಲಗಳಾಗಿ ಬೆನ್ನ ಹಿಂದೆಯೇ ಓಡುತ್ತಲೇ ಇರಬೇಕು ಗುಳ್ಳೆನರಿಯಂತಹ ಪುಡಾರಿಗಳ ಲೆಕ್ಕಾಚಾರಗಳು ಸಿಗದೇ ಕಂಗಾಲಾಗಬೇಕಾದೀತು.
ರಾಜಕಾರಣವೆಂದರೆ ವೈಯಕ್ತಿಕವಾಗಿ ನಿಂದನೆ ಮಾಡಿಕೊಂಡು ಆ ಕುರಿತು ಗುಂಪುಗಳನ್ನು ಕಟ್ಟಿ ದೊಡ್ಡ ದೊಡ್ಡ ಕಟೌಟ್ ಗಳಿಗೆ ತರಹೇವಾರಿ ಹಾರಗಳನ್ನು ಹಾಕಿ ಜಾತಿಯ ತಕ್ಕಡಿಯಲ್ಲಿ ತುಲಾಭಾರ ಮಾಡಿ ಜೈಕಾರ ಹಾಕುವುದು , ಪುಡಾರಿ ಮಾಡಿದ ಎಲ್ಲಾ ವಂಚನೆ ದ್ರೋಹ ಮೋಸ ದರೋಡೆಗಳನ್ನು ಲೀಗಲೈಸ್ ಮಾಡಿ ಸಮರ್ಥನೆ ಮಾಡಿಕೊಂಡು ಅವನು ಮಾಡಿರುವ ಹಗರಣಗಳ ನೆರಳಲ್ಲಿ ತೂಕಡಿಸಿ ಸುಖಿಸುವುದೇ ಆಗಿದೆ ಎಂಬ ಅನಾಹುತಕಾರಿ ಸಂದೇಶವನ್ನು ಈಗಾಗಲೇ ಎಲ್ಲೆಡೆ ರಾಜಾರೋಷವಾಗಿ ಆಚರಿಸಲಾಗುತ್ತಿದೆ.
ಇದರ ಹೊರತಾಗಿ ಸಮಾಜದ ಆಗುಹೋಗುಗಳ ಬಡವರ ದಮನಿತರ ದಲಿತರ ವೃದ್ಧರ ಮುಖ್ಯವಾಗಿ ಯುವಜನರ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ಆ ಕುರಿತು ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾನತೆಯ ಹಾದಿಯಲ್ಲಿ ಎಲ್ಲರನ್ನೂ ಕರೆದೊಯ್ಯುವ ದೂರ ದೃಷ್ಟಿಯುಳ್ಳ ಚಿಂತನೆಗಳನ್ನು ಹೊಂದುವುದೇ ಈ ನಾಡಿನ ಜನರನ್ನು ಪ್ರತಿನಿಧಿಸುವವನ ಆದ್ಯ ಕರ್ತವ್ಯವಾಗಬೇಕಿದೆ.
ಇನ್ನೂ ಸಮಾಜದ ನಾಲ್ಕನೇ ಅಂಗವಾದ ಮಾದ್ಯಮವು ನಾಚಿಕೆ ಬಿಟ್ಟು ಐತಿಹಾಸಿಕವಾಗಿ ಜನರಿಗಾಗಿ ಸಾಧನೆಗೈದು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದಂತಹ ಮಹನೀಯರ ಹೆಸರುಗಳನ್ನು ಈಗಿನ ಪುಡಾರಿಗಳಿಗೆ ಅಂಟಿಸಿ ಮೊಳೆ ಹೊಡೆಯುವ ಕೆಲಸವನ್ನು ಬಿಡಬೇಕು.
ಜನರು ಸಾಮಾಜಿಕ ವಿಕಸನದ ಜ್ಞಾನವನ್ನು ಪಡೆದುಕೊಳ್ಳಬೇಕಾಗಿದೆ; ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….