ದೊಡ್ಡಬಳ್ಳಾಪುರ, (ಮಾ.01); ಸಾರ್ವಜನಿಕರಿಗೆ ಅತ್ಯವಶ್ಯಕವಾದ ಸೇವೆಯನ್ನು ಒದಗಿಸುವ ಕೋರ್ಸುಗಳಲ್ಲಿ ಅರೆ ವೈದ್ಯಕೀಯ ಕೋರ್ಸುಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಉದ್ಯೋಗ ಭದ್ರತೆ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿವೆ ಎಂದು ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥ ಎಂ.ಎಸ್ ಮಂಜುನಾಥ್ ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಹೆಚ್.ಇ.ಎಚ್.ಎಸ್ ಸಮೂಹ ವಿದ್ಯಾಸಂಸ್ಥೆಗಳ ಹೆಚ್.ಇ.ಎಚ್.ಎಸ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ಸಂಭ್ರಮ- 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಇರುವುದು ಶ್ರಮಪಡುವುದಕ್ಕೆ ಹೊರತು ಸುಖ ಪಡುವುದಕ್ಕಲ್ಲ, ಈಗ ಶ್ರಮಪಟ್ಟು ಜ್ಞಾನಾರ್ಜನೆ ಮಾಡಿದರೆ ಮುಂದೆ ಸುಖ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದ ಅವರು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದತೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಷಯ ವಿಜ್ಞಾನವನ್ನು ಅರಿತ ಮನುಷ್ಯ ತನ್ನ ಜೀವನವನ್ನು ಉಜ್ವಲಗೊಳಿಸಿಕೊಳ್ಳಬಹುದು. ಅರೆ ವೈದ್ಯಕೀಯ ಕೋರ್ಸುಗಳು ಪಡೆದವರು ಇಂದು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಸಮಾಜ ತಾನಾಗಿಯೇ ನಮ್ಮನ್ನು ಗೌರವಿಸುತ್ತದೆ. ಶ್ರಮ ಹಾಗೂ ಏಕಾಗ್ರತೆ ಸಾಧನೆಯ ಮೊದಲ ಮೆಟ್ಟಿಲುಗಳು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ತಂತ್ರಜ್ಞಾನದ ದುರ್ಬಳಕೆ ಇಂದು ಹೆಚ್ಚಾಗುತ್ತಿದೆ. ಮೊಬೈಲ್‍ನಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಆರೋಗ್ಯವನ್ನು ಕಾಪಾಡಲು ಸಹಕರಿಸುವ ಅರೆ ವೈದ್ಯಕೀಯ ಪದವೀಧರರು ಮೊದಲು ತಮ್ಮ ಆರೋಗ್ಯದ ಕಡೆ ಲಕ್ಷ್ಯ ನೀಡಬೇಕು. ಕೇವಲ ಪುಸ್ತಕವನಷ್ಟೇ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ತಾಳ್ಮೆ ಹಾಗೂ ಹೊಂದಾಣಿಕೆ ಜೀವನದ ಮುಖ್ಯ ಭಾಗಗಳಾಗಿವೆ. ಸಾಧಾರಣ ವ್ಯಕ್ತಿಗಳಾಗಿದ್ದವರು ನಿರಂತರ ಪರಿಶ್ರಮದಿಂದ ಉನ್ನತ ಮಟ್ಟಕ್ಕೇರಿರುವ ನಿದರ್ಶನಗಳಿವೆ ಎಂದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೂ ಹಾಗು ನೆನಪಿನ ಕಾಣಿಕೆ ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಗೌ.ರಾ.ರಾಮಮೂರ್ತಿ, ಅಧ್ಯಾಪಕರಾದ ಸುನಿಲ್ ಕುಮಾರ್, ಕೀರ್ತನ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….