ಒಂದು ಗ್ರಾಮದಲ್ಲಿ ಹರಿ ಸಿಂಗ್ ಎಂಬ ಬಡ ರೈತ ತನ್ನ ಪತ್ನಿ ಮಾಲತಿ ಜೊತೆ ವಾಸವಾಗಿದ್ದನು. ಶ್ರಮಪಟ್ಟು ದುಡಿದರೆ ಹೊತ್ತಿಗೆ ತುತ್ತಾದರು ಸಿಕ್ಕೀತು. ಇಲ್ಲದಿದ್ದರೆ ಅದು ಇಲ್ಲ. ಹರಿ ಸಿಂಗ್ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೊರಟರೆ, ಮಳೆ ಬಿಸಿಲೆನ್ನದೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದನು. ಆ ದಿನ ಕೆಲಸ ಮಾಡುತ್ತಿರುವಾಗ ಒಬ್ಬ ಸನ್ಯಾಸಿ ಬಂದನು. ಮಗಾ ಕುಡಿಯಲು ನೀರು ಸಿಗುತ್ತದೆಯೇ ಎಂದು ಕೇಳಿದರು. ಹರಿ ಸಿಂಗ್ ಬನ್ನಿ ಎಂದು ಕರೆದು ಮರದ ಕೆಳಗೆ ಕೂರಿಸಿ ಕುಡಿಯಲು ನೀರು ಕೊಟ್ಟನು.
ನಂತರ ಸಾಧುಗಳೇ, ಮಧ್ಯಾಹ್ನದ ಹೊತ್ತು, ನಮ್ಮ ಮನೆಗೆ ಬನ್ನಿ ಊಟ ಮಾಡಿ ಸುಧಾರಿಸಿ ಕೊಂಡು ಹೋಗುವಿರಂತೆ ಎಂದು ಕರೆದುಕೊಂಡು ಬಂದನು. ಮಾಲತಿ ಅಡುಗೆ ಮಾಡುತಿದ್ದಳು. ಸಾಧು ಮತ್ತು ತನ್ನ ಗಂಡನಿಗೆ ಊಟ ಬಡಿಸಿದಳು. ಊಟವಾದ ಮೇಲೆ ಸಾಧು ಕೇಳಿದ. ನೀನು ಬಹಳ ಕಷ್ಟಪಡುತ್ತಿರುವೆ ಕಾರಣವೇನು ಎಂದು ಕೇಳಿದಾಗ, ಹರಿ ಸಿಂಗ್ ಹೇಳಿದ, ಬಾಬಾ ಏನು ಹೇಳಲಿ, ಹಗಲು ರಾತ್ರಿ ಕಂಡವರ ಹೊಲದಲ್ಲಿ ಗೇಯುತ್ತೇನೆ. ಚೋರೋ ಪಾರೋ ಕೂಲಿ ಸಿಗುತ್ತದೆ, ಒಂದು ವೇಳೆ ಬೆಳೆ ಸರಿಯಾಗಿ ಬರದಿದ್ದರೆ ಅದು ಸಿಗುವುದಿಲ್ಲ. ಊಟ ಮತ್ತು ಬಟ್ಟೆಗೆ ಬಹಳ ಕಷ್ಟ ಪಡಬೇಕಾಗಿದೆ ಎಂದನು.
ಹರಿ ಸಿಂಗ್ ಹೇಳಿದ ಮಾತನ್ನು ಕೇಳಿದ ಸಾಧು, ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತರು. ನಂತರ ನೋಡು ನೀವಿಬ್ಬರೂ, ಶಿವ ಮತ್ತು ಅನ್ನಪೂರ್ಣೇಶ್ವರಿ ದೇವಿಯನ್ನು ಪೂಜೆ ಧ್ಯಾನ ಮಾಡುತ್ತಾ ಬನ್ನಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಹೊರಟರು. ಸಾಧುವಿನ ಮಾತಿನಂತೆ ಹರಿ ಸಿಂಗ್ ಮತ್ತು ಅವನ ಹೆಂಡತಿ ಮಾಲತಿ ಅಂದಿನಿಂದಲೇ ಶಿವ ಪಾರ್ವತಿಯರನ್ನು ಭಕ್ತಿಯಿಂದ ಪೂಜಿಸುತ್ತಾ ಬಂದರು. ಶಿವನ ರೂಪದಂತೆ ಬಂದ ಸಾಧು ಹೇಳಿದಕ್ಕೊ ಅಥವಾ ಇವರಿಬ್ಬರೂ ಪೂಜೆ ಮಾಡಿದ ಭಕ್ತಿಗೋ, ಅವರ ಪರಿಸ್ಥಿತಿ ಸುಧಾರಿಸುತ್ತಾ ಬಂದಿತು.
ದಿನ ಕಳೆದಂತೆ ಊಟ ಬಟ್ಟೆಗೆ ಕೊರತೆ ಇರಲಿಲ್ಲ. ಸ್ವಲ್ಪ ದಿನಗಳಲ್ಲೇ ತಮ್ಮದೇ ಸ್ವಂತ ಹೊಲ ಕೊಂಡುಕೊಂಡರು. ಎತ್ತಿನ ಗಾಡಿ, ಮನೆಯ ತುಂಬಾ ದವಸ ಧಾನ್ಯ ತುಂಬಿತು. ಸಂತಾನ ಭಾಗ್ಯವೂ ಲಭಿಸಿತು. ಮಳೆ ಬೆಳೆ ಚೆನ್ನಾಗಿ ಆಗಿ ಫಸಲು ಹೆಚ್ಚು ಹೆಚ್ಚು ಬರತೊಡಗಿತು. ಪಟ್ಟಣದ ಸಮೀಪವೇ ದೊಡ್ಡ ಮನೆಯನ್ನು ಕಟ್ಟಿದ. ಮನೆಯಲ್ಲಿ ಆಳು ಕಾಳು ತುಂಬಿದರು. ಹೆಚ್ಚು ಕಡಿಮೆ ಶ್ರೀಮಂತ ಎನ್ನಬಹುದಾದಷ್ಟೇ ಹರಿ ಸಿಂಗ್ ಬೆಳೆದು ಬಿಟ್ಟನು. ಮಾಲತಿ ಶಿವ ಅನ್ನ ಪೂರ್ಣೇಶ್ವರಿಯನ್ನು ಪೂಜಿಸಲು ಹೇಳಿದ ಸಾಧು ಬರುವಿಕೆಗಾಗಿ ಕಾಯುತ್ತಿದ್ದಳು.
ಶಿವ ಪಾರ್ವತಿಯರ ಪೂಜೆ ಮಾಡುವುದನ್ನು ಒಂದು ದಿನವೂ ತಪ್ಪಿಸಲಿಲ್ಲ. ಮನೆಗೆ ಹಸಿದು ಬಂದವರಿಗೆ ಅನ್ನ ಹಾಕುತ್ತಿದ್ದಳು. ಬಡವರಿಗೆ ಸಹಾಯ ಮಾಡುತ್ತಿದ್ದಳು. ಸಿರಿ ಬಂದಿದೆ ಎಂದು ಮೊದಲಿನ ಬಡತನವನ್ನು ಅವಳು ಮರೆತಿರಲಿಲ್ಲ. ಆದರೆ ಹರಿಸಿಂಗ್ ಗೆ ಹೊಲ- ಮನೆ -ಹಣ- ಸಂಪತ್ತು ಎಲ್ಲ ಬರುತ್ತಿದ್ದಂತೆ ಇದೆಲ್ಲ ತನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬಂದಿತು. ತಾನು ಕಷ್ಟಪಟ್ಟು ದುಡಿದಿದ್ದಕ್ಕೆ ಇಷ್ಟೆಲ್ಲಾ ಬಂದಿತು ಎಂದುಕೊಂಡು, ಜಂಬದಿಂದ ಓಡಾಡುತ್ತಿದ್ದನು.
ಮೊದಲಿನಂತೆ ಊರ ಹಿರಿಯರಿಗೆ ಬೆಲೆ ಕೊಡುತ್ತಿರಲಿಲ್ಲ. ಪೂಜೆ ಪುನಸ್ಕಾರಗಳನ್ನು ಮಾಡುತ್ತಿರಲಿಲ್ಲ. ಪತ್ನಿ ಹೇಳಿದಳು ನಮಗೆ ಶಿವ ಹಾಗೂ ಆ ತಾಯಿ ಅನ್ನಪೂರ್ಣೇಶ್ವರಿ ದಯೆಯಿಂದ ಇಷ್ಟೆಲ್ಲಾ ಸಿರಿ ಸಂಪತ್ತು ಬಂದಿದೆ, ಈ ಹಿಂದೆ ನೀವು ಒಬ್ಬ ಕೂಲಿ ಆಗಿದ್ದೀರಿ ಎಂಬುದು ಮರೆತಿದ್ದೀರಿ ಭಗವಂತನನ್ನು ಧ್ಯಾನಿಸುವುದು ಎಲ್ಲಾ ಬಿಟ್ಟಿದ್ದೀರಿ? ಎಂದು ಜೋರು ಮಾಡಿದಳು. ಆದರೆ ಹರಿ ಸಿಂಗ್ ಹೇಳಿದ. ನೀನು ಏನು ಹೇಳುವೆ, ಕಷ್ಟಪಟ್ಟು ಹೊಲದಲ್ಲಿ ನಾನು ಕೆಲಸ ಮಾಡಿಸುತ್ತಿದ್ದೇನೆ. ಹಗಲಿರುಳು ದುಡಿಯುತ್ತಿರುವುದು ನಾನು. ಒಂದು ದಿನವಾದರೂ ಶಿವ ಬಂದಿದ್ದು ನಾನು ಕಾಣೆ , ದುಡಿಮೆಯ ಸಮಯವನ್ನು ಅವನ ಪೂಜೆ ಮಾಡುತ್ತಾ ಕಳೆಯಲು ಸಾಧ್ಯವಿಲ್ಲ ಎಂದನು.
ಈ ಮಾತುಗಳನ್ನು ಕೇಳಿದ ಮಾಲತಿ ಬಹಳ ಬೇಸರಗೊಂಡು ದೇವಸ್ಥಾನಕ್ಕೆ ಹೋಗಿ ಶಿವನ ಮುಂದೆ ಕುಳಿತು ಅತ್ತು ಕಣ್ಣೀರು ಗರೆದಳು. ತನ್ನ ಗಂಡನಿಗೆ ಹೇಗೆ ಅಹಂಕಾರ ಬಂದಿತು, ತಾಯಿ ಅನ್ನಪೂರ್ಣೇಶ್ವರಿ ನೀನೇ ಕಾಪಾಡಬೇಕೆಂದು ಬೇಡಿಕೊಂಡಳು.
ಹೀಗಿರುವಾಗಲೇ ಆ ದಿನ ಹಿಂದೆ ಬಂದು, ಪೂಜೆ ಮಾಡುವಂತೆ ಹೇಳಿದ್ದ ಸಾಧು ಬಂದನು. ಹರಿ ಸಿಂಗ್ ಮನೆ ಮುಂದೆ ಕಟ್ಟಿದ ಉಯ್ಯಾಲೆ ಮೇಲೆ ಕುಳಿತು ತೂಗಿ ಕೊಳ್ಳುತ್ತಿದ್ದನು. ಸಾಧು ಬಂದವನೇ, ಮಗ ಈಗ ಹೇಗಿದ್ದೀಯಾ ಎಂದು ಕೇಳಿದನು. ಹರಿಸಿಂಗ್ ಕುಳಿತ ಲ್ಲಿಂದ ಏಳಲು ಇಲ್ಲ, ಸಾಧುಗಳಿಗೆ ಗೌರವ ಕೊಡದೆ ಕುಳಿತಲ್ಲೆ ಚೆನ್ನಾಗಿದ್ದೇನೆ. ನೀವು ಬಂದ ಕಾರಣವೇನು ಎಂದನು.
ನಾನು ಭೋಜನ ಸ್ವೀಕರಿಸಲು ಬಂದಿದ್ದೇನೆ ಎಂದಾಗ ತಕ್ಷಣ ಹರಿ ಸಿಂಗ್, ಸಾಧು, ಸನ್ಯಾಸಿಗಳಿಗೆ ಊಟ ಹಾಕಲು ಇದು ಧರ್ಮ ಛತ್ರವಲ್ಲ. ಬೇಕಾದರೆ ಹಣವನ್ನು ಕೊಡುತ್ತೇನೆ ಎಂದು ನೋಟಿನ ಕಂತೆಯನ್ನೇ ಸಾಧುವಿಗೆ ಕೊಡಲು ಹೋದನು. ನಾವು ಸನ್ಯಾಸಿಗಳು ನಮಗೆ ಹಣದ ಅವಶ್ಯಕತೆ ಇಲ್ಲ ಏನಿದ್ದರೂ ಆಯಾ ಹೊತ್ತಿಗೆ ಆಹಾರ ನೀರು ಇದ್ದರೆ ಅಷ್ಟೇ ಸಾಕು ನಮಗೆ ಹಣವನ್ನು ಇಟ್ಟುಕೊಳ್ಳುವ ಅಭ್ಯಾಸವಿಲ್ಲ ಎಂದು ಸಾಧು ಹೇಳಿ ಅಲ್ಲಿ ನಿಲ್ಲದೆ ನಾನಿನ್ನು ಬರುತ್ತೇನೆ ನಿನ್ನ ಹಣ ನಿನಗೆ ಇರಲಿ ಎಂದು ಹೊರಟೇಬಿಟ್ಟನು.
ಇದಾದ ಮೇಲೆ ಮತ್ತೊಂದು ದಿನ ಮಾಲತಿ ಗಂಡನಿಗೆ ಮಧ್ಯಾಹ್ನದ ಊಟಕ್ಕೆಂದು ತಟ್ಟೆಯ ತುಂಬಾ ಬಡಿಸಿ ಕೊಟ್ಟಳು. ಅವನು ಒಂದು ತುತ್ತು ತಿಂದು, ಇದೇನು ಕೂಲಿ ಕೆಲಸದವರಿಗೆ ಕೊಡುವ ಆಹಾರವನ್ನು ನನಗೆ ಕೊಟ್ಟಿರುವೆಯಲ್ಲ ಇದನ್ನು ನೀನೇ ತಿನ್ನು ಎಂದು ಆಹಾರ ಬಡಿಸಿದ ತಟ್ಟೆಯನ್ನು ಟೇಬಲ್ಲಿಂದ ಕೆಳಗೆ ತಳ್ಳಿದನು. ನೆಲದ ಮೇಲೆ ಬಿದ್ದ ಆಹಾರವೆಲ್ಲ ಚಲ್ಲಾಪಿಲ್ಲಿಯಾಗಿ ಹರಡಿತು. ಇದರಿಂದ ಮಾಲತಿಗೆ ದುಃಖವಾಗಿ, ಆಹಾರ ಚೆನ್ನಾಗಿಲ್ಲದಿದ್ದರೆ ಚೆನ್ನಾಗಿಲ್ಲ ಎಂದು ಹೇಳಬೇಕು ಅದು ಬಿಟ್ಟು ಆಹಾರದ ತಟ್ಟೆಯನ್ನು ಹೀಗೆ ತಳ್ಳಿ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದಳು. ಅವನು ಏನೂ ಹೇಳದೆ ಸಿಟ್ಟಿನಿಂದ ಹೊರಗೆ ಹೋದನು. ಕೆಲ ದಿನ ಕಳೆಯಿತು. ಇದ್ದಕ್ಕಿದ್ದಂತೆ ಹರಿ ಸಿಂಗ್ ಆಯಾಸದಿಂದ ಹಾಸಿಗೆ ಹಿಡಿದ. ಅವನಿಗೆ ಒಂದು ತುತ್ತು ಅನ್ನವು ಸೇರುತ್ತಿರಲಿಲ್ಲ. ಹೀಗಾಗಿ ಅವನ ದೇಹ ಕೃಶವಾಗುತ್ತಾ ಬಂತು.
ಇದರಿಂದ ಮಾಲತಿ ಗಾಬರಿಗೊಂಡಳು. ಮತ್ತು ಹಳ್ಳಿ ಪೇಟೆ ಎಲ್ಲಾ ಕಡೆಗೂ ಇರುವ ವೈದ್ಯರನ್ನೆಲ್ಲ ಕರೆಸಿ ತೋರಿಸಿದಳು ಯಾವುದು ಪ್ರಯೋಜನ ಬರಲಿಲ್ಲ. ಹರಿ ಸಿಂಗ್ ಮತ್ತಷ್ಟು ನಿತ್ರಾಣಗೊಂಡ. ಮನೆಯಲ್ಲಿದ್ದ ಹಣ, ಒಡವೆ ಎಲ್ಲಾ ಅವನ ಕಾಯಿಲೆಗಾಗಿ ಖರ್ಚಾಯಿತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳುಕಾಳುಗಳಿಗೆ ದುಡ್ಡು ಕೊಡ ಲಾಗಿದೆ ಅವರೆಲ್ಲರೂ ಬಿಟ್ಟು ಹೋದರು. ಮನೆ, ಔಷಧಿ, ಖರ್ಚಿಗೆ ಹಣ ಸಾಕಾಗದೆ ಮನೆಯನ್ನು ಸೇಟುಗೆ ಮಾರಿದಳು. ಅವರು ಮೊದಲಿದ್ದ ಹಳೆ ಮನೆಗೆ ಬಂದರು.
ಒಂದು ದಿನ ಮಾಲತಿ ಔಷಧಿ ತರಲು ಪಟ್ಟಣಕ್ಕೆ ನಡೆಯುತ್ತಿದ್ದಳು. ಹಾದಿಯಲ್ಲಿ ಒಂದು ಮರದ ಕೆಳಗೆ ಅದೇ ಸಾಧು ಧ್ಯಾನ ಮಾಡುತ್ತಾ ಕುಳಿತಿದ್ದರು. ಮಾಲತಿ ಅವರನ್ನು ಕಂಡಿದ್ದೆ ತಡ ಓಡಿ ಹೋಗಿ ಅವರ ಹತ್ತಿರ ಕುಳಿತು ಕಣ್ಣೀರಿಟ್ಟಳು. ಸಾಧು ಏಕೆ ಎಂದು ಕೇಳಿದಾಗ, ನಡೆದ ಘಟನೆ ಹೇಳಿದಳು. ಇದನ್ನು ಕೇಳಿದ ಸಾಧು ನಿನ್ನ ಗಂಡ, ತಾಯಿ ಅನ್ನಪೂರ್ಣೇಶ್ವಯನ್ನು ಅನಾದರ ಮಾಡಿ ಅವಮಾನಿಸಿದ್ದಾನೆ. ದೇವಿಯ ಅವಕೃಪೆಯಿಂದ ಪಾರಾಗುವುದು ಬಹಳ ಕಷ್ಟ ಎಂದನು. ಆಗ ಮಾಲತಿ ಮತ್ತಷ್ಟು ಅಳುತ್ತಾ, ಅದಕ್ಕೆ ಏನಾದರೂ ಪರಿಹಾರ ನೀವೇ ಸೂಚಿಸಬೇಕು ಇಲ್ಲದಿದ್ದರೆ ನಾನು ನನ್ನ ಪ್ರಾಣವನ್ನು ಇಲ್ಲಿ ತ್ಯಾಗ ಮಾಡುತ್ತೇನೆ ಎಂದಳು. ಕನಿಕರಗೊಂಡ ಸಾಧು, ಇದಕ್ಕೆ ಒಂದೇ ಒಂದು ಉಪಾಯವಿದೆ. ಶುದ್ಧ ಮಡಿ ಯಿಂದ ಉಪವಾಸವಿದ್ದು ಮೂರು ದಿನಗಳ ಕಾಲ ‘ಮಹಾ ಮೃತ್ಯುಂಜಯ ಜಪವನ್ನು ಎಡೆಬಿಡದೆ ಮಾಡಬೇಕು.
ಇದು ಮಹಾ ಶಿವನ ಅನುಗ್ರಹಕ್ಕೆ ಪಾತ್ರವಾಗುತ್ತದೆ. ಶಿವ ಕರುಣೆ ತೋರಿದರೆ ನಿನ್ನ ಪತಿ ಅನಾರೋಗ್ಯದಿಂದ ಮುಕ್ತನಾಗಿ ಆಹಾರ ಸೇವಿಸುತ್ತಾನೆ. ಹಾಗೂ ಅನ್ನಪೂರ್ಣೇಶ್ವರಿ ಯಲ್ಲಿ ಕ್ಷಮೆ ಯಾಚಿಸಿ, ಬೇಡಿಕೊಳ್ಳಬೇಕು ಅನ್ನಪೂರ್ಣೇಶ್ವರಿ ದಯೆ ತೋರಿದರೆ, ನಿಮಗೆ ಅನ್ನ ಭಂಡಾರ ಸಂಪತ್ತನ್ನು ಮತ್ತೆ ಕರುಣಿಸುತ್ತಾಳೆ. ಆಮೇಲೆ ಗ್ರಾಮದವರೆಗೆ ಸಾಧು, ಸಂತರಿಗೆ ,ಬಡವರಿಗೆ, ಬಂದು ಬೇಡಿದವರಿಗೆ ಗೌರವಾದರದಿಂದ ಅನ್ನದಾನ ವನ್ನು ಮಾಡಬೇಕು ಎಂದನು.
ಮತ್ತೆ ಮಾಲತಿ ಸಾಧುವಿನ ಬಳಿ, ಶಿವನ ಕುರಿತು ಧ್ಯಾನ ಮಾಡುವ ಮಹಾ ಮೃತ್ಯುಂಜಯ ಜಪ ನನಗೆ ಹೇಳಿ ಹಾಗೂ ಈಗ ನಮ್ಮ ಕೈಯಲ್ಲಿ ಏನೂ ಇಲ್ಲ ಬಡಬಗ್ಗರಿಗೆ ಹೇಗೆ ಅನ್ನದಾನ ಮಾಡಲಿ ಎಂದು ಕೇಳಿದಳು. ಸಾಧು ಹೇಳಿದರು, ಮಹಾ ಮೃತ್ಯುಂಜಯ ಜಪ ಮಂತ್ರವನ್ನು ನಿನಗೆ ಹೇಳುತ್ತೇನೆ. ನೀನು ಬಡಬಗ್ಗರಿಗೆ ಅನ್ನದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡರೆ ಸಾಕು ಅನ್ನಪೂರ್ಣೇಶ್ವರಿ ಒಲಿಯುತ್ತಾಳೆ ಅವಳು ಒಲಿದ ಮೇಲೆ ನೀನು ಎಲ್ಲಾ ಬಡಬಗ್ಗರಿಗೂ ಸಾಧು ಸಂತರಿಗೂ ಅನ್ನದಾನವನ್ನು ಮಾಡಿ ನಿನ್ನ ಐಶ್ವರ್ಯವನ್ನು ಮತ್ತೆ ಬರುವಂತೆ ಮಾಡಿಕೋ ಎಂದನು. ಸಾಧು ಹೇಳಿದ ಮಾತಿನಂತೆ ಮನೆಗೆ ಬಂದು ಸಂಕಲ್ಪ ಮಾಡಿ,
ಮೂರು ದಿನಗಳ ಕಾಲ ಮಹಾ ಮೃತ್ಯುಂಜಯ ಜಪವನ್ನು ಜಪಿಸಿದಳು. ಮೂರು ದಿನ ವಾಗುತ್ತಿದ್ದಂತೆ ಹರಿ ಸಿಂಗ್ ನ ಆರೋಗ್ಯ ಸುಧಾರಿಸಿತು. ಅವನು ಹಾಸಿಗೆಯಿಂದ ಎದ್ದನು. ಪತ್ನಿ ಮಾಲತಿ ಜೊತೆ ಕುಳಿತು ಪಾರ್ವತಿ ಪರಮೇಶ್ವರಲ್ಲಿ ಕ್ಷಮೆ ಯಾಚಿಸಿ ಭಕ್ತಿಯಿಂದ ಪ್ರಾರ್ಥಿಸಿದನು. ತಾನು ಮಾಡಿದ ತಪ್ಪನ್ನು ಕ್ಷಮಿಸುವಂತೆ ಬೇಡಿ ಕೊಂಡನು. ಶಿವ ಪಾರ್ವತಿಯರು ಅವರ ಭಕ್ತಿಗೆ ಮೆಚ್ಚಿ ಹರಸಿದರು. ಹರಿ ಸಿಂಗ್ ಆರೋಗ್ಯ ಸಂಪೂರ್ಣವಾಗಿ ಗುಣವಾಯಿತು
ಮೂರು ದಿನಗಳ ವ್ರಥ ಮುಗಿಸಿ ಸಾಧು ಇದ್ದಲ್ಲಿಗೆ ಮಾಲತಿ ಬಂದಳು. ತನ್ನ ಗಂಡನ ಆರೋಗ್ಯ ಸುಧಾರಿಸಿರುವುದನ್ನು ಹೇಳಿದಳು. ಅನ್ನದಾನದ ಬಗ್ಗೆ ಏನು ಮಾಡಲಿ ಎಂದು ಕೇಳಿದಳು, ಸಾಧು ಎರಡು ದಿನ ಬಿಟ್ಟು ನಾನೇ ಬರುತ್ತೇನೆ ಎಂದನು. ಮಾಲತಿ ಮತ್ತು ಅವಳ ಗಂಡ ಊರವರಿಗೆಲ್ಲಾ ಅನ್ನದಾನ ಮಾಡುವುದರ ಚಿಂತಿಸುತ್ತಿದ್ದರು. ಆ ಸಮಯಕ್ಕೆ ಸಾಧು ಬಂದನು. ಹರಿ ಸಿಂಗ್ ಸಾಧು ವನ್ನು ನೋಡುತ್ತಲೇ ಬಿಕ್ಕುತ್ತಾ ಅವರ ಪಾದಕ್ಕೆ ಬಿದ್ದನು. ಸಾಧು ಅವನನ್ನು ಮೇಲೆತ್ತಿ, ಅಹಂಕಾರ ಒಳ್ಳೆಯದಲ್ಲ ಅದರೊಳಗೂ ದೇವರ ಮುಂದೆ ಅಹಂಕಾರ ತೋರಿಸ ಬಾರದು, ಬಾಗಬೇಕು ಎಂದನು.
ಅನ್ನದಾನದ ವಿಚಾರ, ಮಾಲತಿ ಹೇಳಿದಾಗ, ಸಾಧು ಹೇಳಿದನು ನೀನೇನು ಯೋಚಿಸಬೇಡ ಎಂದು ಪ್ರಸಾದ ದಷ್ಟು ಚೂರು ಅಕ್ಕಿಯನ್ನು ಆಕೆಯ ಕೈಗೆ ಹಾಕಿ ನೀನು ಮಾಡುವ ಅನ್ನದಲ್ಲಿ ಈ ಅಕ್ಕಿ ಹಾಕಿಬಿಡು, ಅಕ್ಷಯ ಪಾತ್ರೆಯಂತೆ ಅನ್ನ ಉಕುತ್ತದೆ ಎಂದನು. ಅವಳು ಅನ್ನದಾನ ಮಾಡಲು ಎಲ್ಲರನ್ನೂ ಕರೆದು ಬಂದಳು ಅಡುಗೆ ಮಾಡುವ ದಿನ ಅನ್ನದ ತಪ್ಪಲೆಗೆ ಸಾಧು ಕೊಟ್ಟ ಚೂರು ಅಕ್ಕಿಯನ್ನು ಹಾಕಿದಳು, ಸಾಧು ಹೇಳಿದಂತೆ, ಯಾರೆಷ್ಟೇ ಜನ ಬಂದು ಎಷ್ಟೇ ತಿಂದರೂ ಅನ್ನ ತುಂಬುತ್ತಲೇ ಇತ್ತು. ಬಂದವರಿಗೆಲ್ಲ ಯಥೇಚ್ಛವಾಗಿ ಅನ್ನದಾನ ಮಾಡಿದರು.
ಅದರ ನಂತರ ಹರಿ ಸಿಂಗ್ ಎಂದೂ ಅಹಂಕಾರ ಪಡದೆ ಮೊದಲಿನಂತೆ ಸರಳ ವ್ಯಕ್ತಿಯಾಗಿ ಜೀವನ ಸಾಗಿಸ ತೊಡಗಿದನು. ಇದರಿಂದ ಶಿವ ಪಾರ್ವತಿಯರ ಅನುಗ್ರಹ ದೊರಕಿ, ಅವರ ಮನೆಯಲ್ಲಿ ಮತ್ತೆಂದೂ ಅನ್ನ, ಸಂಪತ್ತಿಗೆ ಕೊರತೆಯಾಗಲಿಲ್ಲ. ಹರಿ ಸಿಂಗ್ ಮತ್ತು ಮಾಲತಿ ಇಬ್ಬರು ಪ್ರತಿನಿತ್ಯ ಶಿವ -ಪಾರ್ವತಿ ಯರನ್ನು ಭಕ್ತಿಯಿಂದ ಆರಾಧಿಸುತ್ತಾ ಬಂದರು. ಅವರ ಶ್ರದ್ಧಾ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅವರ ಮೇಲೆ ಅಪಾರವಾದ ಧನ -ಸಂಪತ್ತು, ಆಹಾರ, ಆರೋಗ್ಯ ಅನುಗ್ರಹಿಸಿದರು.
ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….