ಒಬ್ಬ ಶ್ರೀಮಂತ ವ್ಯಾಪಾರಿ. ಆತನಿಗೆ ಹಣ, ಹೆಸರು, ಸಂಸಾರ, ಹೆಂಡಿರು ಮಕ್ಕಳು ಎಲ್ಲವನ್ನು ಕಂಡು ಜೀವನ ಸಾಕಾಗಿತ್ತು. ಈ ಜೀವನದಿಂದ ಮುಕ್ತಿ ಹೊಂದಬೇಕು ಎಂದು ಒಬ್ಬ ಗುರುಗಳ ಬಳಿ ಬಂದು, ಸ್ವಾಮಿ ನನಗೆ ಈ ಜೀವನ ಸಾಕು ಮುಕ್ತಿ ಮಾರ್ಗಕ್ಕೆ ಹೋಗುವ ದಾರಿ ತೋರಿಸಿ ಎಂದು ಕೇಳಿದ.
ಗುರುಗಳು ಶ್ರೀಮಂತನನ್ನು ಒಮ್ಮೆ ದೃಷ್ಟಿಸಿ ನೋಡಿದರು. ಎರಡು ದಿನ ಬಿಟ್ಟು ಬಾ ಎಂದರು. ಎರಡು ದಿನ ಬಿಟ್ಟು ಗುರುಗಳ ಬಳಿ ಹೋದಾಗ ನಿನಗೆ ಮೋಕ್ಷದ ಉಪದೇಶ ಮಾಡುತ್ತೇನೆ. ನಾಳೆ ಸೂರ್ಯೋದಯಕ್ಕೂ ಮೊದಲೇ ಸ್ನಾನ ಮಾಡಿ ಮಡಿಯಿಂದ ಬಾ ಎಂದರು. ಆತ ಮರುದಿನ ನದಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತನಾಗಿ ಮಡಿ ವಸ್ತ್ರ ಧರಿಸಿ, ಬರುವ ಮಾರ್ಗದಲ್ಲಿ ಯಾರನ್ನು ನೋಡದೆ ಭಗವಂತನ ಸ್ಮರಣೆ ಮಾಡುತ್ತಾ ಬಂದು ಗುರುಗಳೇ ಸ್ನಾನ ಮಾಡಿ ಬಂದೆ ಉಪದೇಶ ಮಾಡಿ ಎಂದನು.
ಮತ್ತೆ ನೋಡಿದ ಗುರುಗಳು, ಈ ದಿನ ಬೇಡ ನಾಳೆ ಸ್ನಾನ ಮಾಡಿ ಶುದ್ಧವಾಗಿ ಬಾ ಎಂದರು. ಮರುದಿನವೂ ಹೀಗೆ ಆಯಿತು. ವ್ಯಾಪಾರಿ ಶುಚಿರ್ಭೂತನಾಗಿ ಬಂದರೆ ಈ ದಿನ ಬೇಡ ನಾಳೆ ಬಾ ಉಪದೇಶ ಕೊಡುತ್ತೇನೆ ಎಂದರು. ಶ್ರೀಮಂತನಿಗೆ ಕೋಪ ಬಂತು. ಇದೇನು ಗುರುಗಳೇ ಮೂರ್ನಾಲ್ಕು ದಿನದಿಂದ ಈಗ ಬೇಡ ಆಗಬೇಡ ಎಂದು ಸತಾಯಿಸುತ್ತಿರುವಿರಿ. ಮೋಕ್ಷ ಕೊಡಲು ಇಷ್ಟವಿಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳಿ. ಹೀಗೆ ನಾಳೆ ಬಾ ನಾಳೆ ಬಾ ಎಂದು ಯಾಕೆ ನನಗೆ ಹೇಳುತ್ತೀರಿ. ನೀವು ಒಬ್ಬರೇ ಗುರುಗಳು ಎಂದುಕೊಂಡಿದ್ದೀರಾ? ಬೇಕಾದಷ್ಟು ಜನ ಇದ್ದಾರೆ ನಾನು ನೋಡಿಕೊಳ್ಳುತ್ತೇನೆ ಎಂದು ಜೋರು ಧ್ವನಿಯಲ್ಲಿ ಹೇಳಿದ. ತಾಳ್ಮೆ ಯಿಂದ ಕೇಳುತ್ತಿದ್ದ ಗುರುಗಳ ಮುಖದಲ್ಲಿ ಮುಗುಳ್ನಗೆ ಮೂಡಿತು.
ಅವರ ನಗು ನೋಡಿ, ಸಿಟ್ಟಿನಿಂದ ವ್ಯಾಪಾರಿ ಮತ್ತಷ್ಟು ಜೋರಾಗಿ ಹೇಳಿದ, ಗುರುಗಳೇ ನಾನು ತಾಳ್ಮೆ ಗೆಡದೆ ಸಹನೆಯಿಂದ ನೀವು ಹೇಳಿದಂತೆ ಪ್ರತಿದಿನ ನದಿಯಲ್ಲಿ ಸ್ನಾನ ಮಾಡಿ ಮಡಿ ವಸ್ರ್ತಧರಿಸಿ ಯಾರನ್ನೂ ನೋಡದೆ, ಮುಟ್ಟಿಸಿ ಕೊಳ್ಳದೆ, ಮಾತಾಡದೆ ಶುದ್ಧವಾಗಿ ಬರುತ್ತಿದ್ದೆ. ಅಷ್ಟು ಎಚ್ಚರಿಕೆಯಿಂದ ಬಂದ ನನ್ನಲ್ಲಿ ಏನು ತಪ್ಪಾಗಿದೆ, ಅಂತಹದು ಏನಿತ್ತು ಎಂದು ಸಿಟ್ಟಿನಿಂದ ಗುಡುಗಿದ. ಅಷ್ಟೇ ತಾಳ್ಮೆಯಿಂದ ಗುರುಗಳು ಹೇಳಿದರು, ನೀನು ಅವರನ್ನು, ಇವರನ್ನು ಮುಟ್ಟಿಲ್ಲ, ನೋಡಿಲ್ಲ ಮಾತಾಡಿಲ್ಲ, ಸ್ನಾನ ಮಾಡಿ, ಯಾರ ನೆರಳನ್ನು ಸೋಕಿಸಿ ಕೊಳ್ಳದೆ, ನಡೆಯುತ್ತಿದ್ದೆ ಎಂದು ಹೇಳಿದೆಯಲ್ಲ. ಅವುಗಳು ಯಾವುದು ಮೋಕ್ಷದ ದಾರಿಯಲ್ಲ.
ಸ್ನಾನ ಬೇಕಿರುವುದು ನಿನ್ನ ಮಾತಿಗೆ, ನಿನ್ನ ದೇಹಕ್ಕೆ, ಮನಸ್ಸಿಗೆ, ಅಂತರಂಗಕ್ಕೆ, ಬೇರೆ ಯವರ ನೆರಳು ಬಿದ್ದರೆ, ಅವರೊಂದಿಗೆ ಮಾತನಾಡಿದರೆ, ಮುಟ್ಟಿಸಿಕೊಂಡರೆ, ಪಶು ಪಕ್ಷಿ ಪ್ರಾಣಿಗಳು, ಅಡ್ಡ ಹೋದರೆ, ಎದುರು ಬಂದರೆ ಅವೆಲ್ಲಾ ಮೈಲಿಗೆಯಲ್ಲ. ನಿನ್ನಲ್ಲಿರುವ ನಾನು, ಎಂಬ ಅಹಂಕಾರ, ಮಾತು. ಸಿಟ್ಟು, ಕ್ರೋಧ, ದರ್ಪ, ಇವುಗಳನ್ನು ಬಿಟ್ಟು ಭಗವಂತನ ಸ್ಮರಣೆ ಮಾಡು, ದೀನರಲ್ಲಿ ದಯೆ ತೋರು. ಈ ರೀತಿ ಮಡಿಯಾಗಿ ಬಾ ಎಂದು ಹೇಳಿದ್ದು. ಆತನಿಗೆ ಅರ್ಥ ವಾಯಿತು ಗುರುಗಳಿಗೆ ವಂದಿಸಿ, ಗುರುಗಳಿಂದ ಅರಿವಿನ ಜ್ಞಾನ ಪಡೆದು, ಗುರು ತೋರಿದ ಮಾರ್ಗದಲ್ಲೇ ನಡೆದು ಮೋಕ್ಷ ಪಡೆದನು.
ಮಡಿ’ ಇದರ ಅರ್ಥ ನಿತ್ಯ ಸ್ನಾನ ಮಾಡಿ ಒಗೆದ ಅಥವಾ ಮಡಿ( ಮಡಚಿದ) ಬಟ್ಟೆ ಧರಿಸುವುದು. ಮಡಿ- ಮೈಲಿಗೆ, ಇದಕ್ಕೆ ವಿಪರೀತ ಅರ್ಥಗಳನ್ನು ಸೇರಿಸಿ,ಜಾತಿ, ಮತ, ಧರ್ಮ ಏನೂ ಇಲ್ಲ. ಕುವೆಂಪು ರವರು ಹೇಳಿದ ಹಾಗೆ ಇರುವುದೊಂದೇ ಮನುಷ್ಯ ಜಾತಿ.
ಮಡಿ ಎಂದರೆ, ಒಗೆದ ಬಟ್ಟೆಯನ್ನು ಮಡಿಕೆ ಮಾಡು ಅಥವಾ ಒಗೆದು ಮಡಿಚಿಟ್ಟ ಬಟ್ಟೆಯನ್ನು ಧರಿಸುವುದು. ಅಂದಿನ ಸಮಾಜದ (ಕೆಲವು) ಜನರು ನಿತ್ಯ ಸ್ನಾನ ಮಾಡುತ್ತಿರಲಿಲ್ಲ. ಯಾವಾಗ ಅಂದರೆ ಅವಾಗ ಸ್ನಾನ ಮಾಡುತ್ತಿದ್ದರು. ಹೇಗಾಯಿತೊ ಹಾಗೆ ಬದುಕುತ್ತಿದ್ದರು. ನಿತ್ಯ ಸ್ನಾನ ಮಾಡಿ, ಒಗೆದು ಮಡಿ ಮಾಡಿದ ಬಟ್ಟೆ ಧರಿಸಬೇಕು. ಧ್ಯಾನ, ಜಪ, ತಪ, ಮಾಡಿ ಪ್ರತ್ಯಕ್ಷ ಕಾಣುವ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಬೇಕು. ಆಹಾರವನ್ನು ಒಂದು ಕ್ರಮದಲ್ಲಿ ತಿನ್ನಬೇಕು. ಗುರುಕುಲ ದಲ್ಲಿ ಓದು, ಬರಹ, ಕಲಿಕೆ ಶಿಕ್ಷಣ ಕಲಿಯಬೇಕು ಎಂಬುದನ್ನು ಸಮಾಜದಲ್ಲಿ ರೂಢಿಗೆ ತಂದವನು ಶ್ರೀ ಕೃಷ್ಣ.
ಮನರಂಜನೆಗೆ, ಸಂಗೀತ, ಸಾಹಿತ್ಯ, ನೃತ್ಯ, ಭಕ್ತಿಗೆ ಭಜನೆ, ಹಾಗೆ ಆಹಾರಕ್ಕಾಗಿ ಮೈ ಬಗ್ಗಿಸಿ ದುಡಿದು ಧಾನ್ಯ ಕಾಳು ಬೆಳೆದು ತಿನ್ನುವುದು. ಬರಿ ಮೈಯಲ್ಲಿ ಸ್ನಾನ ಮಾಡುತ್ತಿದ್ದ 5 ವರ್ಷದ ಗೋಪಿಕೆಯರಿಗೆ ಬಟ್ಟೆ ಹಾಕಿಕೊಂಡು ಸ್ನಾನ ಮಾಡಬೇಕು ಎಂದು ತಿದ್ದಿ, ಜ್ಞಾನ ಮಾರ್ಗ ತೋರಿದ. ಹೀಗೆ ಸಮಾಜದಲ್ಲಿ ಅನೇಕ ಸುಧಾರಣೆ ತಂದು, ಅದನ್ನು ತಿಳಿಸಿ, ಅರಿವು ಮೂಡಿಸಿ ಕಟ್ಟಳೆ ಎನ್ನುವಂತೆ ಮಾಡಿ, ಒಳ್ಳೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದನು.
ಈ ಮಡಿ ಮೈಲಿಗೆಯನ್ನು ಆಯಾ ಕಾಲಘಟ್ಟದಲ್ಲಿ ಬೇರೆ ರೀತಿಯಾಗಿ ಅರ್ಥೈಸಿ ಲಾಗಿದೆ. ನಮ್ಮಂತೆ ಇರುವ ಮತ್ತೊಬ್ಬ ವ್ಯಕ್ತಿಯನ್ನು ಸ್ಪರ್ಶಿಸಿದರೆ ಮೈಲಿಗೆ ಎಂದರೆ ಅದು ಮೂರ್ಖತನವಾಗುತ್ತದೆ. ಮೈ ಸ್ನಾನ ಮಾಡಿ ತೊಳೆಯಬೇಕಾಗಿರುವುದು
ಕಠಿಣ ನುಡಿಗಳು, ಮತ್ತು ಚಂಚಲ ಮನಸ್ಸನ್ನು. ಮನಸ್ಸು ಶುಚಿಯಾಗಿರಬೇಕು. ಇಂದ್ರಿಯಗಳನ್ನು ನಾವು ನಿಯಂತ್ರಿಸಿದರೆ ಅದೇ ಮಡಿ. ಇಂದ್ರಿಯಗಳನ್ನು ಜಯಿಸದಿದ್ದರೆ ಅದು ಮೈಲಿಗೆ.
ಬರಹ ಕೃಪೆ: ಆಶಾ ನಾಗಭೂಷಣ. ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….