ಬೆಂಗಳೂರು, (ಮೇ.11): ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ವಯೋಸಹಜ ಆನಾರೋಗ್ಯದಿಂದ ದಾಖಲಾಗಿರುವ ಅವರು ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ಅವರನ್ನು ಏಪ್ರಿಲ್ 21 ರಂದು ಮೊದಲು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಜ್ಞ ವೈದ್ಯರಾದ ಡಾ. ಸುನೀಲ್ ಕಾರಂತ್ ಅವರ ನೇತೃತ್ವದ ಕ್ರಿಟಿಕಲ್ ಕೇರ್ ತಂಡವು ಎಸ್.ಎಂ.ಕೃಷ್ಣ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ತೆರಳಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಕೃಷ್ಣ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಸಿಎಂ ಹಾರೈಸಿದ್ದರು.
ಇಂದು ಸಂಜೆ ಮಾಜಿ ಸಿಎಂ ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣ ಅವರ ಭೇಟಿ ನಿಗದಿಯಾಗಿತ್ತು.
ಈ ಬೆನ್ನಲ್ಲೆ ಎಸ್.ಎಂ.ಕೃಷ್ಣ ಅವರ ಆರೋಗ್ಯದ ಕುರಿತು ನಕಾರಾತ್ಮಕ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಸ್.ಎಂ.ಕೃಷ್ಣ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದಿದ್ದು, ಆತುರಕ್ಕೆ ಬಿದ್ದು ನಕಾರಾತ್ಮಕ ಸುದ್ದಿಗಳನ್ನು ಹರಡದಂತೆ ಮನವಿ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….