ದೊಡ್ಡಬಳ್ಳಾಪುರ, (ಮೇ.11): ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಶೆಟ್ಟಿಹಳ್ಳಿ ಬಳಿಯ ಜೆಪಿ ಪ್ಯಾಲೇಸ್ ಬಳಿ ನಡೆದ ಗಲಾಟೆಯಲ್ಲಿ ಹೇಮಂತ್‌ಗೌಡ (28 ವರ್ಷ) ಎಂಬಾತನನ್ನು ಲಾಂಗುಗಳಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಶುಕ್ರವಾರ ರಾತ್ರಿ ನಡೆದಿದೆ.
ಹತ್ಯೆಯಾದ ಹೇಮಂತ್‌ಗೌಡ ತಾಲೂಕಿನ ಹುಸ್ಕೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಹತ್ಯೆಗೂ ಮುನ್ನ ಹೋಟೆಲ್ ಬಳಿ ಸುಮಾರು 10 ರಿಂದ 15 ಜನ ಇದ್ದ ಎರಡು ಯುವಕರ ಗುಂಪುಗಳ ನಡುವಿನ ಮಾತಿನ ಚಕಮಕಿ ಸೇರಿದಂತೆ ಲಾಂಗುಗಳಿಂದ ಹತ್ಯೆ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಹೇಮಂತ್‌ಗೌಡ ಸ್ನೇಹಿತರೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಬಗ್ಗೆ ಸುಳಿವು ದೊರೆತಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ’ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷ ಮಾಧ್ಯಮಗಳಿಗೆ ಹೇಳಿದ್ದಾರೆ.
ಬೆಚ್ಚಿ ಬಿದ್ದ ಜನ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವಾಗಿದ್ದು,ಇಲ್ಲಿನ ಕೈಗಾರಿಕೆಗಳಿಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಜನ ಕಾರ್ಮಿಕರು ಕೆಲಸಗಳಿಗಾಗಿ ಬಂದು ಇಲ್ಲಯೇ ನೆಲೆಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ಗಳ ಸಂಖ್ಯೆಯು ಹೆಚ್ಚಾಗಿರುವುದರಿಂದ ಮಹಿಳಾ ಕಾರ್ಮಿಕರು ಇಲ್ಲಿನ ಹತ್ತಾರು ಪಿಜಿಗಳಲ್ಲೇ ಉಳಿದುಕೊಂಡು ಕೆಲಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇಷ್ಟೆಲ್ಲಾ ಜನರು ಇರುವ ಪ್ರದೇಶದಲ್ಲಿನ ಹೋಟೆಲ್ ಬಳಿ ನಡೆದಿರುವ ಗ್ಯಾಂಗ್ ವಾರ್ ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಠಿಸಿದೆ.
ಇತ್ತೀಚೆಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆಗಳು ಹೆಚ್ಚಾಗುತ್ತಿವೆ, ಗಾಂಜಾ ಮಾರಾಟ ತೀವ್ರವಾಗಿದೆ, ಬೆಂಗಳೂರು ನಗರದಲ್ಲಿ ಸಕ್ರಿಯವಾಗಿರುವ ರೌಡಿ ಶೀಟರ್‌ಗಳು ಗ್ರಾಮೀಣ ಭಾಗದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿರುವುದೇ ಈ ರೀತಿಯ ಹತ್ಯೆಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ಈ ಬಗ್ಗೆ ಪೊಲೀಸರು ಆರೋಪಿಗಳ ಬಂಧನದ ನಂತರ ತೀವ್ರ ವಿಚಾರಣೆಗೆ ಒಳಪಡಿಸಿ ಹತ್ಯೆಗೆ ನಿಖರವಾದ ಕಾರಣ ತಿಳಿಯಬೇಕು. ಇಂತಹ ಹತ್ಯೆಗಳು ಮರುಕಳುಹಿಸದಂತೆ ಎಚ್ಚರವನ್ನು ವಹಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….