ಮಂಗಳೂರು, (ಜುಲೈ.10); ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ, ಸಂಸತ್ತಿಗೆ ತೆರಳಿ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂದು ಹೇಳಿಕೆ ನೀಡುವ ಮೂಲಕ, ಹಿಂದು ಎಂದು ಕೊಳ್ಳುವವರು (ಬಿಜೆಪಿ) ಅಹಿಂಸೆಯನ್ನು ಹರಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಾಕ್ಷಿಯೆಂಬಂತೆ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವನ್ನು ನೀಡಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸುವ ವೇಳೆ, ರಾಹುಲ್ ಗಾಂಧಿಗೆ ಸಂಸತ್ತಿಗೆ ಹೋಗಿ ಕಪಾಳಕ್ಕೆ ಬಾರಿಸಬೇಕು ಎಂದು ಹೇಳಿದ್ದರು.
ಈ ಹೇಳಿಕೆ ಇದೀಗ ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕ ಭರತ್ ಶೆಟ್ಟಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಶಾಸಕ ಡಾ. ಭರತ್ ಶೆಟ್ಟಿ ಒಬ್ಬ ನಾಲಾಯಕ್ ರಾಜಕಾರಣಿ. ಆತನಿಗೆ ತಾಕತ್ತಿದ್ದರೆ, ಗಂಡು ಮಗ ಆಗಿದ್ದರೆ ಜಿಲ್ಲೆಯ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಮುಟ್ಟಿ ನೋಡಲಿ ಎಂದು ಮಾಜಿ ಸಚಿವ ರಮನಾನಾಥ ರೈ ಅವರು ಸವಾಲು ಹಾಕಿದ್ದಾರೆ.
ಭರತ್ ಶೆಟ್ಟಿ ಅವರಿಗೆ ತಾಕತ್ತಿದ್ದರೆ, ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಹಾಕಿ ನೋಡಲಿ. ಆಮೇಲೆ ನೋಡೋಣ. ಸಂಸತ್ತಿನ ವಿಪಕ್ಷ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾದ ರಾಹುಲ್ ದೇಶಕ್ಕೆ ಪ್ರಾಣ ಕೊಟ್ಟ ನೆಹರೂ, ಇಂದಿರಾ ಗಾಂಧಿಯವರ ಕುಡಿ. ರಾಹುಲ್ ಹೇಳಿಕೆಯನ್ನು ಕೆಟ್ಟದಾಗಿ ಪ್ರತಿಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಭರತ್ ಶಾಸಕನಾಗಲು ಯೋಗ್ಯತೆ ಇಲ್ಲದ ಮನುಷ್ಯ. ಅಮರನಾಥ್ ಶೆಟ್ಟಿಯವರ ಕೃಪಾಕಟಾಕ್ಷದಿಂದ ರಾಜಕೀಯದಲ್ಲಿ ಮೇಲೆ ಬಂದು ಅವರಿಗೆ ಕೈ ಕೊಟ್ಟಿದ್ದಾನೆ.
ರಾಹುಲ್ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಹುಲ್ ಅವರನ್ನು ಭರತ್ ಶೆಟ್ಟಿ ಹುಚ್ಚ ಎಂದು ಹೇಳಿದ್ದು, ಆ ಹುಚ್ಚ ಯಾರು ಎಂದು ಅವರ ನಾಯಕರ ಕಟೌಟ್ನಲ್ಲಿ ಅವರ ವೇಷಭೂಷಣ ನೋಡಿದಾಗ ತಿಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಲೋಕಸಭೆಯಲ್ಲಿ ಪ್ರಧಾನಿ ಎದುರೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಮೋದಿಗೆ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಲು ಆಗಿಲ್ಲ. ಇನ್ನು ಭರತ್ ಶೆಟ್ಟಿ ಯಾವ ಲೆಕ್ಕ. ಅವರು ಚಿಲ್ಲರೆ ರಾಜಕಾರಣಿ. ಅವರು ಶಾಸಕರುಗಳ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಅವರಿಗೆ ಸಮಾಜ ಬಹಿಷ್ಕಾರ ಹಾಕಬೇಕು. ವೈದ್ಯರಾಗಿ ಅವರು ನೀಡಿರುವ ಹೇಳಿಕೆ ಘೋರ ಅಪರಾಧ. ಶಸ್ತ್ರಾಸ್ತ್ರ ತೆಗೆಯಲಾಗುವುದು ಎಂದು ಹೇಳಿಕೆ ನೀಡಿರುವ ಭರತ್ ಶೆಟ್ಟಿ ವಿರುದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ.ಹೆಗ್ಡೆ ಮಾತನಾಡಿ, ರಾಹುಲ್ ಗಾಂಧಿ ಹಿಂದು ಧರ್ಮ ದ್ವೇಷ, ಹಿಂಸೆ ಹೇಳುವುದಿಲ್ಲ. ಅದು ಅಭಯ ಕೊಡುತ್ತದೆ. ಬಿಜೆಪಿಯವರು ಪ್ರಚೋದಿಸುತ್ತೀರಿ ಎಂದು ಹೇಳಿದ್ದರು. ಅದನ್ನು ಭರತ್ ಶೆಟ್ಟಿ ಪ್ರೂವ್ ಮಾಡಿದ್ದಾರೆ. ಶಸ್ತ್ರಾಸ್ತ್ರ ಹಿಡಿಯುವ ಹೇಳಿಕೆ ನೀಡಿದ ನಿಮ್ಮ ಹಿಂದುತ್ವದ ಬಗ್ಗೆ ನಾವು ಕೇಳಬೇಕಾಗುತ್ತದೆ. ರಾಹುಲ್ ಗಾಂಧಿ ಅವರಿಗೆ ಹೊಡೆಯಲು ಹೋಗುವುದಿದ್ದರೆ, ಅದರ ಮೊದಲು ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಿ ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….