ಬೆಂಗಳೂರು, (ಜುಲೈ.10); ನೆಲಮಂಗಲದಲ್ಲಿ ನಡೆದಿದ್ದ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮತದಾರರಿಗೆ ಮದ್ಯ ಹಂಚಿಕೆ ಮಾಡಲಾದ ಹಿನ್ನೆಲೆಯಲ್ಲಿ ನೆಲಮಂಗಲ ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೆಲಮಂಗಲದಲ್ಲಿ ನಡೆದಿದ್ದ ಅಭಿನಂದನಾ ಸಮಾರಂಭದಲ್ಲಿ ಮತದಾರರಿಗೆ ಮದ್ಯ ಹಂಚಿಕೆ ಮಾಡಲಾಗಿತ್ತು.
ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಅಲ್ಲದೆ ತತ್ವ, ಸಿದ್ದಾಂತ ಇಲ್ಲಿಗೆ ಬಂದಿದೆ ಎಂಬಂತೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಶಿಸ್ತಿನ ಪಕ್ಷ ಏನು ಮಾಡುತ್ತಿ ಅಂತೆಲ್ಲಾ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.
ಇದರಿಂದ ಅಪಹಾಸ್ಯಕ್ಕೀಡಾದ ಬಿಜೆಪಿ, ನೆಲಮಂಗಲ ಮಂಡಲ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು 6 ವರ್ಷ ಉಚ್ಚಾಟನೆ ಮಾಡಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಉಚ್ಚಾಟಿತ ಮುಖಂಡ ಜಗದೀಶ್ ಚೌಧರಿ, ನಾನೇನು ಮಾಡಬಾರದ್ ಮಾಡಿ ತಲೆದಂಡವಾಗಿಲ್ಲ. ದೊಡ್ಡಮಟ್ಟದ ಕಾರ್ಯಕ್ರಮದಲ್ಲಿ ಒಂದ್ ಹೆಜ್ಜೆ ಮುಂದೆಹೋಗಿ ತಪ್ಪು ಮಾಡಿದ್ದೇನೆ. ಈ ರೀತಿ ಕಾಂಗ್ರೆಸ್ ಮನೆಲಿ, ಬಿಜೆಪಿ ಮನೇಲಿ, ಜೆಡಿಎಸ್ ಮನೇಲಿ ಮಾಡಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಪ್ರಾಮಾಣಿಕ ನಿಷ್ಠಾಯಿಂದ ಇರುವ ಸಾಮಾನ್ಯ ಕಾರ್ಯಕರ್ತನನ್ನು ಏಕಾಏಕಿ ಅಮಾನತು ಮಾಡಿರುವುದು ಮನಸ್ಸಿಗೆ ನೋವಾಗಿದೆ. ಮದ್ಯ ಹಂಚಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಣ ಕೇಳಿದ್ರು. ಉತ್ತರ ನೀಡುವುದರೊಳಗೆ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಲಾಗಿದೆ. ಈಗ ನಾನು ಸಾಮಾನ್ಯ ಕಾರ್ಯಕರ್ತ, ಉಚ್ಚಾಟನೆಯಿಂದ ನೋವಾಗಿದೆ. ಪಕ್ಷದ ನಾಯಕರು ಯಾರೂ ನನ್ನ ಪರ ನಿಲ್ಲದೆ ನನ್ನ ತಲೆದಂಡ ಮಾಡಿದ್ದಾರೆ. ನಾನು ರಾಜಕೀಯದಲ್ಲಿ ಅಂಬೆಗಾಲು ಇಡುವಾಗಲೇ ಚಿವುಟಿದ್ದಾರೆ.
ಸುಧಾಕರ್ ಸೇರಿದಂತೆ ಅನೇಕ ರಾಜ್ಯ ನಾಯಕರು, ಶಾಸಕರು ಕರೆ ಮೂಲಕ ಧೈರ್ಯ ತುಂಬಿದ್ದಾರೆ. ಸುಧಾಕರ್ ಮನೇಗ್ ಬರ್ತೀನಿ ಅಂದ್ರು ನಾನೇ ಬೇಡ ಎಂದು ಹೇಳಿದೆ.
ಒಂದ್ ಬೇಸರ ಏನಂದರೆ ಈ ಜಗತ್ ಯಾರು ಮಾಡ್ದೆ ಇರೋ ಕೆಲಸ ಮಾಡಿ, ನಾ ತಲೆದಂಡ ಆಗಿದ್ದೀನಾ..? ನಾ ಅಲ್ಲೇನ್ ಕ್ಯಾಬರೇ ಡ್ಯಾನ್ಸ್ ಮಾಡ್ಸಿಲ್ಲ, ವಿಷ ಕೊಡ್ಲಿಲ್ಲ, ಕೊಲೆ ಮಾಡಿಲ್ಲ, ರೇಪ್ ಮಾಡಿರೋ ಕೇಸಲ್ಲಿ ಅರೆಸ್ಟ್ ಆಗ್ತಾ ಇಲ್ಲ. ಎಲ್ಲಾ ಸೇರ್ಕಂಡ್ ನನ್ ತಲೆದಂಡ ಮಾಡಿದ್ದಾರೆ ಎಂದರು. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….