ದೊಡ್ಡಬಳ್ಳಾಪುರ, (ಜುಲೈ.10): ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿರುವ ಇ.ಎಸ್.ಐ. ಆಸ್ಪತ್ರೆ ಉದ್ಘಾಟನೆಗೆ ಆಗ್ರಹಿಸಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಗೊಳಿಸುವಂತೆ ರಾಷ್ಟ್ರ ವ್ಯಾಪಿ ಸಿ.ಐ.ಟಿ.ಯು ವತಿಯಿಂದ ಬುಧವಾರ ನಡೆದ ಬೇಡಿಕೆಗಳ ದಿನದ ಅಂಗವಾಗಿ ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಐ.ಟಿ.ಯು ಸಂಚಾಲಕರಾದ ಪಿ.ಎ.ವೆಂಕಟೇಶ್, ಎಲ್.ಆರ್.ನಳಿನಾಕ್ಷಿ, ರೇಣುಕ ಆರಾಧ್ಯ, ಅನಿಲ್ ಗುಪ್ತ, ಇನಾಯಿತ್ಪಾಷ, ರಾಜ್ಯದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಶಂಕುಸ್ಥಾಪನೆಯಾಗಿ, ಕಾಮಗಾರಿ ಮುಕ್ತಾಯವಾಗಿ ಒಂದುವರೆ ವರ್ಷಗಳು ಕಳೆದಿದ್ದರು ಸಹ ರಾಜಕೀಯ ಉದ್ದೇಶಗಳಿಗಾಗಿ 100 ಹಾಸಿಗೆಗಳ ಇ.ಎಸ್.ಐ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಭಾಗ್ಯ ಕಾಣದೆ, ಕಾರ್ಮಿಕ ಸೇವೆಗೆ ಲಭ್ಯವಾಗದೇ ಪಾಳುಬಿದ್ದಿದೆ. ಒಂದುವರೆ ವರ್ಷಗಳ ಕಾಲ ನಿರಂತರ ಧರಣಿಗೆ ಮಣಿದ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿತ್ತು. ಆದರೆ ಇದು ರಾಜ್ಯದಲ್ಲಿ ಇದುವರೆಗೂ ಜಾರಿಗೆ ಬಂದಿಲ್ಲ.
ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸುವ ಕೆಲಸವು ಆಗಿಲ್ಲ. ಎಪಿಎಂಸಿ ವ್ಯವಸ್ಥೆಯನ್ನು ಬಲಗೊಳಿಸಲು ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಗೊಬ್ಬರ ಒಳಗೊಂಡಂತೆ ಕೃಷಿ ಹಿಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಆಗ್ರಹಿಸಿದರು.
ದೇಶದ ಐಕ್ಯತೆಯನ್ನು ಛಿದ್ರಗೊಳಿಸುವ, ಸೌಹಾರ್ದತೆಯನ್ನು ಹಾಳುಮಾಡುವ ಕೃತ್ಯಗಳನ್ನು ಹಾಗೂ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕಿದೆ. ಕನಿಷ್ಠ ವೇತವನ್ನು ಅಕುಶಲ ಕಾರ್ಮಿಕರಿಗೆ ರೂ.31 ಸಾವಿರ ಹಾಗೂ ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ.15ರಷ್ಟು ಹೆಚ್ಚಳದೊಂದಿಗೆ ನಿಗದಿಪಡಿಸಬೇಕು.
ಗ್ರಾಹಕ ಬೆಲೆ ಸೂಚ್ಯಾಂಕದ ಪ್ರತಿ ಅಂತದ ಹೆಚ್ಚಳಕ್ಕೆ ಪ್ರತಿ ದಿನಕ್ಕೆ 6ಪೈಸೆಗಳ ತುಟ್ಟಿಭತ್ಯೆ ನಿಗಧಿಪಡಿಸಬೇಕು, ಬೆಲೆ ಸೂಚ್ಯಾಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ವೈಜ್ಞಾನಿಕ ರೀತಿಯಲ್ಲಿ ಕನಿಷ್ಠ ವೇತನವನ್ನು ನಿಗದಿಪಡಿಸಿ,ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಪ್ರತಿ ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.ಕೈಗಾರಿಕಾ ವಿವಾದಗಳನ್ನು ನಿರ್ಧಿಷ್ಟ ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲು ಸೂಕ್ತ ಕಾನೂನು ತಿದ್ದುಪಡಿಗಾಗಿ ಕ್ರಮಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಆಸ್ತಿ ಹಾಗೂ ಹಣವನ್ನು ಲೂಟಿ ಮಾಡಲು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ನೀಡುವ ಎನ್ಸಿಎಲ್ ಮತ್ತು ಐಸಿಬಿ ಕೋಡ್ ಗಳಲ್ಲಿನ ಜನವಿರೋಧಿ ಕಾರ್ಪೊರೇಟ್ ಪರವಾದ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಬಿ.ನರೇಶ್ಕುಮಾರ್, ಸಾದಿಕ್ಪಾಷ, ಮುನೇಗೌಡ, ಎಲ್.ಸಿ.ಸುಮಾ, ಪಿ.ಕೆ.ವೆಂಕಟೇಶ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….