ಕನಕನಪುರ. ಅಲ್ಲಿ ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಉದ್ದನೆಯ ಮರಗಳು. ಉದ್ದ ಉದ್ದ ಉದ್ದ ಉದ್ದನೆಯ ಮರಗಳು ನಿಂತಿದ್ದವು. ನಿಂತು ನಿಂತು ನಿಂತೇ ಇದ್ದವು.
ಅವುಗಳ ಎಲೆಗಳೆಲ್ಲಾ ಅಲ್ಲಾಡಿ ಅಲ್ಲಾಡಿ ತೂಗುತ್ತಿದ್ದವು. ಅಲ್ಲಿಗೆ ಬಂದವರನ್ನೆಲ್ಲಾ, ‘ಬಾ, ಇಲ್ಲಿ ಬಾ, ನನ್ನ ಬಳಿ ಬಾ, ನೆರಳಿನಲ್ಲಿ ಕೂತುಕೋ ಬಾ, ಮೇಲೆ ನೋಡಿ ನನ್ನ ಹಣ್ಣು ತಿನ್ನು ಬಾ’ ಎಂದು ಕರೆಯುತ್ತಿದ್ದವು.
ಒಂದು ದಿನ ಒಂದು ಮೊಲ ಅಲ್ಲಿಗೆ ಬಂತು. ಅದು ತೆಳ್ಳಗೆ ಬೆಳ್ಳಗೆ ಕುಳ್ಳಾಗಿತ್ತು. ಅದು ಬಹಳ ಹಸಿದಿತ್ತು. ಮೆಲ್ಲಮೆಲ್ಲಗೆ ಮೇಲೆ ನೋಡಿತು. ಮರಗಳ ತುಂಬ ಎಲೆ, ಮರಗಳ ತುಂಬಾ ಹೂ ಗೊಂಚಲು, ಹೂಗಳು ಬಣ್ಣ ಬಣ್ಣವಾಗಿದ್ದವು.
ಗಾಳಿಗೆ ಹೂ ಎಲೆಗಳು ಭೂರ್ ಭೂರ್ ಭೂರ್ ಎಂದು ಶಬ್ದ ಮಾಡುತ್ತಿದ್ದವು. ಮೊಲ ಮೇಲೆ ನೋಡಿತು. ಗಾಳಿಗೆ ಅಲ್ಲಾಡಿದಾಗ ಕಾಯಿಗಳನ್ನು ನೋಡಿತು. ಓಹೋ ಹಣ್ಣುಗಳು ಇವೆಯೋ ಏನೋ ಎಂದು ಇಣಿಕಿ ಇಣಿಕಿ ನೋಡಿತು. ಅವುಗಳಲ್ಲಿ ಒಂದು ಹಣ್ಣಾಗುತ್ತಾ ಬಂದಿತ್ತು. ‘ಅದು ಕೆಳಗೆ ಬಿದ್ದರೆ ಎಷ್ಟು ಚೆನ್ನಾಗಿರುತ್ತದೆ.’ ಎಂದು ಮತ್ತೆ ಮೇಲೆ ನೋಡಿತು. ಮೇಲೆ ತಲೆಯೆತ್ತಿ ನೋಡಿತು. ನೋಡುತ್ತಲೆ ಇತ್ತು. ಹಣ್ಣು ಕೆಳಗೆ ಬೀಳಲೇ ಇಲ್ಲ.
ಮೊಲ ಹಾಗೇ ಹಣ್ಣನ್ನು ನೋಡುತ್ತಾ ಕುಳಿತುಕೊಂಡಿತು. ಕುಳಿತುಕೊಂಡೇ ಇತ್ತು. ಅಲ್ಲಾಡದೇ ಮೇಲೆ ನೋಡುತ್ತಾ ಇತ್ತು. ಅದಕ್ಕೆ ನಿದ್ದೆ ಬರುವ ಹಾಗಾಯಿತು. ನಿದ್ದೆ ಬಂದೇ ಬಿಟ್ಟಿತು. ಏಳಲೇ ಇಲ್ಲ. ಕುಳಿತು ಕೊಂಡೇ ನಿದ್ದೆ ಮಾಡಿತು. ರಾತ್ರಿಯಾಯಿತು. ಬೆಳಗಾಯಿತು.ರಾತ್ರಿಯಾಯಿತು, ಬೆಳ ಗಾಯಿತು. ರಾತ್ರಿ ಬೆಳಗು ಆಗುತ್ತಲೇ ಇತ್ತು.
ಹಣ್ಣು ಚೆನ್ನಾಗಿ ಮಾಗಿತ್ತು. ಒಂದು ದಿನ ಬೆಳಗ್ಗೆ ಹಣ್ಣು ಮಾಗಿ ಮೊಲದ ತಲೆಯ ಮೇಲೆ ದೊಪ್ ಎಂದು ಬಿತ್ತು. ದೊಪ್ ಎಂದು ಅದರ ಮೂಗಿನ ಮೇಲೆ ಬಿತ್ತು. ದೊಪ್, ದೊಪ್, ದೊಪ್ ಎಂದು ಅದರ ಬೆನ್ನ ಮೇಲೆ ಬಿತ್ತು. ಮೊಲಕ್ಕೆ ಬಹಳ ನೋವಾಯಿತು. ತಲೆ ನೋಯಿತು. ಹಾ! ಬೆನ್ನು ನೋಯಿತು. ‘ಹಾ’ ಎಂದು ಕೂಗುತ್ತಾ ಎಚ್ಚರಗೊಂಡಿತು. ಎಚ್ಚರಗೊಂಡು.
ಸುತ್ತ ಮುತ್ತ ನೋಡಿತು. ಅಗಲವಾಗಿ ಕಣ್ಣು ಬಿಟ್ಟು ನೋಡಿತು. ಕಣ್ಣು ಬಿಟ್ಟು ದಿಟ್ಟಿಸಿ ನೋಡಿತು. ಹಣ್ಣುಗಳೆಲ್ಲಾ ನೆಲದ ಮೇಲೆ ಬಿದ್ದಿದ್ದವು. ಹಳದಿಯಾಗಿ ಹಣ್ಣುಗಳು ಬಿದ್ದಿದ್ದವು. ಓಹೋ! ಓಹೋ ಹಣ್ಣು ಹಣ್ಣು ಹಣ್ಣು ಎಂದು ಕಿರುಚಿಕೊಂಡಿತು.
ಓಹೋ! ಹಣ್ಣು ಎಂದು ಗಟ್ಟಿಯಾಗಿ ಕಿರಿಚಿಕೊಂಡಿತು. ಓಹೋ ಹಣ್ಣು ಎಂದು ಮತ್ತೂ ಗಟ್ಟಿಯಾಗಿ ಕಿರಿಚಿಕೊಂಡಿತು. ಮೊಲ ಕಿರಿಚಿದುದನ್ನು ಕೇಳಿ ಮರದ ಮೇಲೆ ಮಲಗಿದ್ದ ಪಕ್ಷಿಗಳಿಗೆ ಎಚ್ಚರವಾಯಿತು. ಪಕ್ಷಿಗಳೆಲ್ಲಾ – ಎಚ್ಚರವಾದವು. ಚಿಲಿ ಪಿಲಿ ಚಿಲಿ ಪಿಲಿ ಶಬ್ದಮಾಡಿದವು. ಚಿಲಿ ಪಿಲಿ ಚಿಲಿ ಪಿಲಿ ಶಬ್ದಮಾಡಿ ಹಾರಿ ಬಂದವು. ಚಿಲಿ ಪಿಲಿ ಚಿಲಿ ಪಿಲಿ ಶಬ್ದ ಮಾಡಿ ಹಾರಿ ಹಾರಿ ಬಂದವು. ಹಾರಿ ನೋಡಿದವು. ಕಣ್ಣುಕಣ್ಣು ಬಿಟ್ಟು ನೋಡಿದವು. ಓಹೋ! ಹಣ್ಣುಗಳೋ! ಹಣ್ಣುಗಳೂ! ಕಿರುಚಿಕೊಂಡವು.
ಮರಗಳ ಮೇಲೆ ಅಳಿಲುಗಳೂ ಇದ್ದವು. ತಮ್ಮ ಗೂಡುಗಳಲ್ಲಿ ಮಲಗಿದ್ದವು. ಪಕ್ಷಿಗಳ ಚಿಲಿ ಪಿಲಿ ಶಬ್ದವನ್ನು ಕೇಳಿ ಎಚ್ಚರ ಗೊಂಡವು. ಎಚ್ಚರಗೊಂಡು ಕೀವ್ ಕೀವ್ ಕೀವ್ ಎಂದು ಕಿರುಚಿಕೊಂಡವು. ಕೀವ್ ಕೀವ್ ಕೀವ್ ಎಂದು ಕಿರಿಚಿಕೊಂಡು ಕೆಳಗೆ ಇಳಿದು ಬಂದವು.
ಇಳಿದು ಬಂದು ನೋಡಿದವು. ಓಹೋ! ಓಹೋ! ಹಣ್ಣುಗಳೂ! ಹಣ್ಣುಗಳೂ!, ಎಂದು ಕಿರುಚಿಕೊಂಡವು. ಅದನ್ನು ಕೇಳಿ ಮರಗಳ ಮೇಲೆ ಇದ್ದ ಮಂಗಗಳೂ ಎಚ್ಚರಗೊಂಡವು. ಎಚ್ಚರಗೊಂಡವು. ಕೂವ್ ಕೂವ್ ಕೋವ್ ಕೋವ್ ಎಂದು ಕೂಗಿಕೊಂಡವು. ಕೂಗಿಕೊಂಡು ಕೆಳಗೆ ಇಳಿದುಬಂದವು. ಬಂದು ಹಣ್ಣುಗಳನ್ನು ನೋಡಿದವು. ನೋಡಿ ‘ಓಹೋ! ಹಣ್ಣುಗಳು’ ಹಣ್ಣುಗಳೂ! ಬನ್ನಿ! ಎಲ್ಲರೂ ಬನ್ನಿ, ‘ನಾವೆಲ್ಲಾ ಸೇರಿ ಹಣ್ಣನ್ನು ತಿನ್ನೋಣ’ ಎಂದು ಕಿರುಚಿಕೊಂಡವು.
ಮರದ ಕೆಳಗೆ ಪಕ್ಷಿಗಳು, ಅಳಿಲುಗಳು, ಮಂಗಗಳು ಮತ್ತು ಮೊಲ ಬಿಟ್ಟ ಕಣ್ಣು ಮುಚ್ಚದೇ ನೋಡಿದವು. ಸ್ವಲ್ಪ ಹೊತ್ತು ಕಳೆಯಿತು. ಎಲ್ಲವೂ ಸೇರಿ ಹಣ್ಣುಗಳನ್ನು ಆರಿಸಿದವು, ‘ಈ ಹಣ್ಣು ನೋಡು ಎಷ್ಟು ಚೆನ್ನಾಗಿದೆ’ ಎಂದು ಒಂದು ಮಂಗ ಹೇಳಿತು. ‘ಈ ಹಣ್ಣು ನೋಡು ಎಷ್ಟು ಬಣ್ಣವಾಗಿದೆ’ ಎಂದು ಅಳಿಲು ಹೇಳಿತು.
ಈ ಹಣ್ಣು ನೋಡು ‘ಎಷ್ಟು ಮಾಗಿದೆ’ ಎಂದು ಮೊಲ ಹೇಳಿತು. ಒಂದು ಪುಟ್ಟ ಹಕ್ಕಿ ಕೊಕ್ಕಿನಿಂದ ಒಂದು ಹಣ್ಣನ್ನು ಕಚ್ಚಿ ‘ಈ ಹಣ್ಣು ನೋಡು ಎಷ್ಟು ರುಚಿಯಾಗಿದೆ’ ಎಂದು ಹೇಳಿತು.
ಅಲ್ಲಿ ನೆರೆದಿದ್ದ ಪಕ್ಷಿಗಳು, ಮೊಲ, ಅಳಿಲುಗಳು ಮತ್ತು ಮಂಗಗಳು ಗುಂಡಾಗಿ ಮಂಡಲ ನಿಂತವು. ವೃತ್ತಾಕಾರದಲ್ಲಿ ಎಲ್ಲವೂ ಕುಳಿತುಕೊಂಡವು. ಪಕ್ಷಿಗಳು ಒಂದೊಂದು ಹಣ್ಣನ್ನು ಕೊಕ್ಕಿನಲ್ಲಿ ಕಚ್ಚಿಕೊಂಡಿದ್ದವು. ಮೊಲ, ಅಳಿಲುಗಳು ಮತ್ತು ಮಂಗಗಳು ಕೈಯಲ್ಲಿ ಒಂದೊಂದು ಹಣ್ಣುಗಳನ್ನು ಇಟ್ಟುಕೊಂಡಿದ್ದವು. ಅಂದು ಅವುಗಳಿಗೆ ಭಾರಿ ಊಟವೇ ಆಯಿತು.
ಕೃಪೆ; ಮಕ್ಕಳ ಅಭಿವೃದ್ಧಿ ಪ್ರಾಧಿಕಾರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….