ದೊಡ್ಡಬಳ್ಳಾಪುರ, (ಜುಲೈ.23); ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದರೆ ನಮ್ಮ ಖಾತೆಗಳಿಗೆ ಪ್ರಧಾನ ಮಂತ್ರಿಗಳು ಪ್ರತಿ ತಿಂಗಳು ರೂ.3,000 ಜಮೆ ಮಾಡಲಿದ್ದಾರೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ನಗರದ ಸೋಮೇಶ್ವರ ಬಡಾವಣೆಯಲ್ಲಿನ ಮುಖ್ಯ ಅಂಚೆ ಕಚೇರಿ ಮುಂದೆ ಬೆಳಗಿನ ಜಾವ 5 ಗಂಟೆಯಿಂದಲು ನೂರಾರು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬರುತ್ತಿದ್ದಾರೆ. ಮಹಿಳೆಯರ ಒತ್ತಾಯಕ್ಕೆ ಮಣಿದು ಪುರುಷರು ಸಹ ಸಾಲುಗಳಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಹೊಸದಾಗಿ ಉಳಿತಾಯ ಖಾತೆಗಳನ್ನು ತೆರೆಯಲು ಮುಗಿಬಿದ್ದಿದ್ದಾರೆ.
ಇದರಿಂದ ಈಗಾಗಲೇ ಸಿಬ್ಬಂದಿ ಕೊರತೆಯಿಂದ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಕೆಲಸಗಳು ನಿದಾಗತಿಯಲ್ಲಿ ನಡೆಯುತ್ತಿದ್ದ ಬಗ್ಗೆ ಗ್ರಾಹಕರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದರು.
ಈಗ ಸುಳ್ಳು ಮಾಹಿತಿ ನಂಬಿ ಜನರು ಹೊಸ ಖಾತೆಗಳನ್ನು ತೆರೆಯಲು ಸಾಲುಗಟ್ಟಿ ನಿಲ್ಲುತ್ತಿರುವುದು ಇಲ್ಲಿನ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
‘ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಆದೇಶ ಬಂದಿರುವ ಕುರಿತು ಎಲ್ಲಿಯೂ ಮಾಹಿತಿ ಇಲ್ಲ. ಆದರೆ ಈ ಬಗ್ಗೆ ಸರ್ಕಾರದ ಉನ್ನತ ಅಧಿಕಾರಿಗಳು ಜನರಿಗೆ ಯಾರೂ ಸರಿಯಾದ ಮಾಹಿತಿ ನೀಡದೇ ಇರುವುದೇ ಜನರಲ್ಲಿ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಮನೆಗಳಲ್ಲಿ ಕೆಲಸಗಳನ್ನು ಬಿಟ್ಟು, ಕಾರ್ಖಾನೆಗಳ ಕೆಲಸಗಳಿಗೆ ಹೋಗುವ ಜನರು ಉಳಿತಾಯ ಖಾತೆಗಳನ್ನು ತೆರೆಯಲು ಅಂಚೆ ಕಚೇರಿ ಮುಂದೆ ದಿನವಿಡೀ ಸಾಲುಗಟ್ಟಿ ನಿಲ್ಲುವಂತಾಗಿದೆ.
ಜವಾಬ್ದಾರಿ ಸ್ಥಾನದಲ್ಲಿನ ಅಧಿಕಾರಿಗಳು ಈ ಗೊಲದ ಬಗ್ಗೆ ಸ್ಪಷ್ಟನೆ ನೀಡಬೇಕು. ಅಥವಾ ಈ ಮಾಹಿತಿ ನಿಜವೇ ಆಗಿದ್ದರೆ ಹೊಸ ಖಾತೆಗಳನ್ನು ತೆರೆಯಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಗ್ರಾಹಕರು ಅಗತ್ಯ ದಾಖಲೆಗಳನ್ನು ನೀಡಿದರೆ ನಾವು ಉಳಿತಾಯ ಖಾತೆ ತೆರೆಯುವುದಿಲ್ಲ ಎಂದು ಹೇಳುವಂತಿಲ್ಲ. ಆದರೆ ಸರ್ಕಾರದಿಂದ ಗ್ರಾಹಕರ ಖಾತೆಗಳಿಗೆ ಹಣ ಬರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎನ್ನುವ ಅಂಚೆ ಇಲಾಖೆಯ ಸಿಬ್ಬಂದಿ, ಹೊಸ ಖಾತೆಗಳು ತೆರೆಯಲು ಜನರ ನೂಕು ನುಗ್ಗಲು ಎರಡು ದಿನಗಳಿಂದ ಹೆಚ್ಚಾಗುತ್ತಲೇ ಇದೆ. ನಾವು ಜನರಿಗೆ ತಿಳಿಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….