ಬೆಂಗಳೂರು, (ಆಗಸ್ಟ್.04): ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ದೋಸ್ತಿ ಪಕ್ಷದ ಮುಖಂಡರು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ಆರಂಭಿಸಿದ್ದು, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪಣ ತೊಟ್ಟರು.
ಪಾದಯಾತ್ರೆಗೂ ಮುನ್ನ ಹಮ್ಮಿಕೊಂ ಡಿದ್ದ ಬೃಹತ್ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್ ನ ಪ್ರಮುಖರು ನಗಾರಿ ಬಾರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಹಳೆ ಮೊಳಗಿಸಿದರು.
ಶನಿವಾರ ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೆ.ಕೆ. ಗ್ರಾಂಡ್ ಅರೆನಾ ಸೆಂಟರ್ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿಗೆ 128 ಕಿ.ಮೀ. ದೂರ ಚಲಿಸುವ ಪಾದಯಾತ್ರೆಯಲ್ಲಿ ಮೊದಲ ದಿನ ಶನಿವಾರದಂದು 16ಕಿ.ಮೀ. ಪಾದ ಯಾತ್ರೆ ಕೈಗೊಳ್ಳಲಾಯಿತು.
ದಾರಿಯುದ್ದಕ್ಕೂ ಕೇಸರಿ, ಹಸಿರು ಬಾವುಟ ರಾರಾಜಿಸುತ್ತಿದ್ದವು. ಬಿಜೆಪಿ-ಜೆಡಿ ಎಸ್ನ ಪ್ರಮುಖ ಮುಖಂಡರು ಪಾದಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು.
ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮೊದಲ ದಿನದಪಾದಯಾತ್ರೆ ಮುಕ್ತಾಯಗೊಂಡಿತು. ಬಿಡದಿಯ ಮಂಜುನಾಥ್ ಕನ್ವೆನ್ಷನ್ ಸೆಂಟರ್ನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಾಸ್ತವ್ಯ ಹೂಡಿದರು. ಇಂದು ಎರಡನೇ ದಿನ ಅಲ್ಲಿಂದ ಪಾದಯಾತ್ರೆ ಮುಂದುವರಿಯಲಿದೆ.
ನಿಖಿಲ್ ಕುಮಾರಸ್ವಾಮಿ ಹೇಳಿಕೆ; ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ರಾಮನಗರ ಪಾದಯಾತ್ರೆ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಗುರಿ ಮುಟ್ಟುವ ತನಕ ಹೋರಾಟದ ಮುಂದುರೆಯುತ್ತೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಈ ಪಾದಯಾತ್ರೆ ಮೂಲ ಉದ್ದೇಶವೆಂದರೆ ಮುಡಾದಲ್ಲಿ ಆಗಿರೋ ಅಕ್ರಮವನ್ನ ಬಯಲಿಗೆಳೆಯಲು ಈ ಪಾದಯಾತ್ರೆ ನಡೆಯುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಆಗಿರೋ ಕೋಟ್ಯಾಂತರ ರೂಪಾಯಿ ಟ್ರಾನ್ಸಾಕ್ಷನ್ ಆಗಿರೋದು ಇತಿಹಾಸದಲ್ಲೇ ಮೊದಲು. ಐದು ಗ್ಯಾರಂಟಿ ಬಗ್ಗೆ ರಾಜ್ಯದ ಜನರಲ್ಲಿ ವಿಶ್ವಾಸ ಹುಟ್ಟಿಸಿದ್ರು. ಈಗ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಮತ ಹಾಕದಿದ್ರೆ ಐದು ಗ್ಯಾರಂಟಿ ರದ್ದು ಮಾಡೋದಾಗಿ ಮಾಗಡಿ ಬಾಲಕೃಷ್ಣ ಅಣ್ಣನವರೇ ಹೇಳಿದ್ರು, ಅದರಂತೆ ಲೋಕಸಭಾ ಚುನಾವಣೆ ಬಳಿಕ ಐದು ಗ್ಯಾರಂಟಿ ರದ್ದು ಮಾಡಿದ್ದಾರೆ.
ಇನ್ನು ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ರೈತ ಕುಟುಂಬ ಆತ್ಮಹತ್ಯೆಗೆ ಮುಂದಾಗಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಳಿಗ್ಗೆ ಮಳೆಯ ಶುಭ ಸೂಚನೆ ನೀಡಿದೆ. ನಮ್ಮ ಜೊತೆ 120 ಕಿ.ಮೀ ಹೆಜ್ಜೆ ಹಾಕ್ತೀರ ಅಂತ ಬಯಸಿದ್ದೇನೆ. ಇನ್ನೂ 105 k.m ಇನ್ನೂ ಹೆಜ್ಜೆ ಹಾಕಬೇಕಿದೆ. ಇನ್ನೂ ಸಾಕಷ್ಟು ಸಂಘಟನೆಗಳು ನಮ್ಮ ಜೊತೆ ಕೈಜೋಡಿಸಲಿವೆ. ಹಿರಿಯರು, ಮಹಿಳೆಯರು, ಯುವಕರು ಹೆಜ್ಜೆ ಹಾಕಿದ್ದಾರೆ.ಎರಡೂ ಪಕ್ಷದ ಕಾರ್ಯಕರ್ತರು ಕೆಂಗೇರಿ ಇಂದ ಬಿಡದಿ ವರೆಗೂ ಯಶಸ್ವಿಯಾಗಿ ಹೆಜ್ಜೆ ಹಾಕಿದ್ದಾರೆ ಎಂದು ಹೇಳಿದರು.
ಇನ್ನು ಇದೇ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿದರು. ರಾಜ್ಯದ ಉಪ ಮುಖ್ಯಮಂತ್ರಿಗಳು ಬಿಡದಿಯಲ್ಲಿ ಸಮಾವೇಶ ಮಾಡಿದ್ದಾರೆ. ನನಗಿಂತ ನೀವು ಹಿರಿಯರಿದ್ದೀರಿ. ಶಿವಕುಮಾರ್ ಅಣ್ಣ ಯಾವತ್ತು ಅಧಿಕಾರ ಶಾಶ್ವತ ಅಲ್ಲ. ಕನ್ನಡಿಗರ ಮುಂದೆ ತಲೆ ಬಾಗಿದ್ರೆ ಅಧಿಕಾರದಲ್ಲಿ ತೆಗೆದುಕೊಂಡು ಹೋಗ್ತಾರೆ. ಆದ್ರೆ ನೀವು ನಿನ್ನೆ ಮಾಡಿದ ಪ್ರಶ್ನೆಗೆ ನಾಳೆ ಕುಮಾರಣ್ಣ ಅವರೇ ಬಂದು ಉತ್ತರ ಕೊಡ್ತಾರೆ. ಸದನದಲ್ಲಿ ಉತ್ತರ ಕೊಡದೆ ಫಲಾಯಾನ ಮಾಡಿ ಹೋಗಿದ್ದೀರಿ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ರು.
ಇನ್ನು ರಾಹುಲ್ ಗಾಂಧಿ ಅವರೇ ನಿಮಗೆ ನೈತಿಕತೆ ಇದ್ರೆ. ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಿರಿ. ನರೇಂದ್ರ ಮೋದಿ ಅವರು ದೇಶದಲ್ಲಿ ಮೂರನೇ ಬಾರಿ ಪ್ರಧಾನಿ ಆಗಿದ್ದಾರೆ.ಆದ್ರೆ ಚುನಾವಣೆ ಮೊದಲು ಸಂವಿಧಾನ ಬದಲಿಸ್ತಾರೆ ಅಂತ ಹೇಳ್ತಿದ್ರು. ಸಿದ್ರಾಮಣ್ಣ ನೀವು ಸಮಾಜವಾದಿ ಅಲ್ಲ, ಮಜವಾದಿ. ಸಿದ್ರಾಮಣ್ಣ ಅವರೇ ನಿಮಗೆ ನೈತಿಕತೆ ಇದ್ರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….