ದೊಡ್ಡಬಳ್ಳಾಪುರ, (ಆಗಸ್ಟ್.06); ವೃಂದ ಹಾಗೂ ನೇಮಕಾತಿ ನಿಯಮಗಳ ತಿದ್ದುಪಡಿಗಾಗಿ ರಾಜ್ಯ ಸಂಘ ಸರ್ಕಾರದ ವಿರುದ್ಧ ತೀವ್ರವಾದ ಹೋರಾಟ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಹೇಳಿದರು.
ಅವರು ಇಂದು ಡಿಪಿವಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಈ ತಿಂಗಳ 12ರಂದು ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಮುಷ್ಕರದಲ್ಲಿ ಎಲ್ಲ ಶಿಕ್ಷಕರು ಭಾಗವಹಿಸಿ ಮುಷ್ಕರವನ್ನ ಯಶಸ್ವಿಗೊಳಿಸಬೇಕೆಂದು ಹೇಳಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರವಾಗಿ ತಿಳಿಸಿದರು ಇದರ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಈಗಾಗಲೇ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ವೃಂದ ಹಾಗೂ ನೇಮಕಾತಿಯ ನಿಯಮಗಳ ಬಗ್ಗೆ ಹಾಗೂ ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟಿದ್ದು, ಆದಷ್ಟು ಬೇಗ ತಿದ್ದುಪಡಿ ಮಾಡುತ್ತಾರೆಂಬ ಭರವಸೆ ಇದೆ ಎಂದರು.
ರಾಜ್ಯ ಉಪಾಧ್ಯಕ್ಷ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಗಿರೀಶ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಂಬಾ ಬಲಿಷ್ಠ ವಾಗಿದ್ದು ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ನಮಗೆ ನ್ಯಾಯ ಸಿಗಲು ಎಲ್ಲ ಶಿಕ್ಷಕರ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಸಹ ಮುಷ್ಕರದಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು,
ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಹೊಸಕೋಟೆಯ ಶ್ರೀನಿವಾಸ್ ಹಾಗೂ ಕಾರ್ಯದರ್ಶಿ ಗಿರೀಶ್ ರವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಹಿಂದೆ ಮಾಡಿ ಕೊಂಡಿದ್ದ ಒಪ್ಪಂದದಂತೆ, ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನೆಲಮಂಗಲದ ಟಿ.ವಾಸುದೇವಮೂರ್ತಿಯನ್ನು ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ದೊಡ್ಡಬಳ್ಳಾಪುರದ ಜೈ ಕುಮಾರ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದರು.
ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.
ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿ ಮಾತನಾಡಿದ ಟಿ.ವಾಸುದೇವಮೂರ್ತಿ, ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಶಿಕ್ಷಕರ ಒಡನಾಡಿಯಾಗು ಸದಾ ಸ್ಪಂದಿಸುತ್ತ ಶಿಕ್ಷಕರ ಒಡನಾಡಿಯಾಗಿ ಅವರ ಕೆಲಸಗಳನ್ನು ಮಾಡುತ್ತೇನೆಂದು ಹೇಳಿದರು,
ಸಭೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಬಸವಲಿಂಗಯ್ಯ, ಕಾರ್ಯದರ್ಶಿ ಎಂ.ವಿ.ಚಂದ್ರಪ್ಪ, ನಾಲ್ಕು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….