
ನಾಗಮಂಗಲ (ಸೆ.19): ನಾಗಮಂಗಲ ಪಟ್ಟಣದಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆ ವಿಚಾರವಾಗಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಗಲಭೆಗೆ ಸಂಬಂಧ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಂಚಿಕೆ ಮಾಡಿದ್ದಾರೆಂಬ ಆರೋಪದಡಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೊ, ಪೋಟೊಗಳನ್ನು ಪೋಸ್ಟ್ ಮಾಡಿ ದೊಂಬಿ ಗಲಭೆಗೆ ಪ್ರಚೋದನೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಪೋಸ್ಟ್‌ನಲ್ಲಿ ಕಲ್ಲುತೂರಿ, ಬೆಂಕಿ ಹಚ್ಚಿದವರನ್ನು ರಕ್ಷಿಸಿ, ಗಣೇಶ ಮೂರ್ತಿಯನ್ನು ಬಂಧಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ಯನ್ನು ನಾಗಮಂಗಲದಲ್ಲಿ ನಡೆದ ಘಟನೆ ಎಂದು ಸುಳ್ಳು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ.
ಆರ್.ಅಶೋಕ ಅವರು ನಾಗಮಂಗಲ ಘಟನೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಪೋಸ್ಟ್ ಮಾಡಿ ಬೇರೆಡೆ ನಡೆದ 2 ವಿಡಿಯೋಗಳನ್ನು ಲಗತ್ತಿಸಿದ್ದಾರೆ. ಈ ಬಗ್ಗೆಯೂ ಪ್ರಕ ರಣ ದಾಖಲಾಗಿದೆ. ಈ ಸಂಬಂಧ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ರಮೇಶ್ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಕಾಯ್ದೆ 192 ರ ಅಡಿಯಲ್ಲಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.