ಪುಣೆ: ತತ್ವ ಸಿದ್ದಾಂತ ಹೊಂದಿದ್ದ ಕಾರ್ಯಕರ್ತರ ಪಕ್ಷವೆಂದೆ ಹೆಸರು ಪಡೆದಿದ್ದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಹಣ ಅಧಿಕಾರವೇ ಮುಖ್ಯವೆಂಬಂತೆ ವರ್ತಿಸುತ್ತಿದ್ದು, ತತ್ವ, ಸಿದ್ದಾಂತಗಳನ್ನು ಗಾಳಿಗೆ ತೂರುತ್ತಿದೆ ಎಂಬುದು ಅನೇಕ ಬಲಪಂಥೀಯ ಚಿಂತಕರು ಹಾಗೂ ನಿಷ್ಠಾವಂತ ಕಾರ್ಯಕರ್ತರ ಆರೋಪವಾಗಿದೆ.
ಇದಕ್ಕೆ ಪೂರಕವೆಂಬಂತೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಂಡಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿಗಾಗಿ ಸ್ವಂತ ದುಡ್ಡಿನಲ್ಲಿ ಮಂದಿರವನ್ನೇ ಕಟ್ಟಿಸಿ ಪ್ರತಿಮೆ ಅನಾವರಣಗೊಳಿಸಿದ್ದ ಕಾರ್ಯಕರ್ತ ಇದೀಗ ಪಕ್ಷವನ್ನೇ ತೊರೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.
ಬಿಜೆಪಿ ಕಾರ್ಯಕರ್ತರನಾಗಿದ್ದ ಮಯೂರ್ ಮುಂಡೆ ಎಂಬುವವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷವನ್ನು ತೊರೆದಿದ್ದಾರೆ.
ಬೇರೆ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮಂತ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಮೂಲಕ ನಮ್ಮ ಘನತೆಯನ್ನು ಕುಗ್ಗಿಸಲಾಗುತ್ತಿದೆ ಎಂದು ಪಕ್ಷದ ವಿರುದ್ಧವೇ ಮುಂಡೆ ಅಸಮಾಧಾನ ಹೊರೆ ಹಾಕಿದ್ದಾರೆ.

1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂದಿರ ಕಟ್ಟಿಸಿ ಅದರಲ್ಲಿ ಪ್ರಧಾನಿಯವರ ಪ್ರತಿಮೆಯನ್ನು ಮುಂಡೆ ಅನಾವರಣಗೊಳಿಸಿದ್ದರು. ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಹೈಕಮಾಂಡ್ ನಾಯಕರ ಸೂಚನೆಯಂತೆ ಮೋದಿ ಅವರ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.