ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಎರಡು ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಟಿಕೆಟ್ ನೀಡಲಾಗಿದೆ.
ಸಂಡೂರಿನಲ್ಲಿ ಜನಾರ್ಧನ ರೆಡ್ಡಿ ಆಪ್ತ ಬಂಗಾರು ಹನುಮಂತು ಅವರಿಗೆ ಟಿಕೆಟ್ ಖಚಿತವಾಗಿದೆ. ಆದರೆ ತಮ್ಮ ಆಪ್ತ ದಿವಾಕರ್ ಅವರಿಗೆ ಟಿಕೆಟ್ ಕೊಡಿಸಲು ಹರಸಾಹಸ ಪಡುತ್ತಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಪ್ರಯತ್ನ ವಿಫಲವಾದಂತಿದೆ.
ಉಳಿದಂತೆ ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ ಎಂಬುವುದು ಬಿಜೆಪಿ- ಜೆಡಿಎಸ್ ನಾಯಕರು ಸದ್ಯ ನಿಗೂಢವಾಗಿ ಇರಿಸಿದ್ದಾರೆ. ಶಿಗ್ಗಾಂವಿಗೆ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಬೊಮ್ಮಾಯಿ ಅವರು ಸಕ್ಸಸ್ ಆಗಿದ್ದಾರೆ.
ಆದರೆ ಇದಕ್ಕೂ ಮುನ್ನ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಸವರಾಜ ಬೊಮ್ಮಾಯಿ ನಾನು ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಅಂತ ಹೇಳಿದ್ದೇನೆ ಎಂದಿದ್ದರು.
ಶಿಗ್ಗಾವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರು ಮತ್ತು ನಾಯಕರ ನಡುವೆ ಏನು ಮಾತುಕತೆಯಾಗಿದೆಯೊ ಗೊತ್ತಿಲ್ಲ. ಆದರೆ, ನಾನು ಇಷ್ಟು ವರ್ಷ ಅಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಅಲ್ಲಿನ ಜನರು ನನ್ನ ಮಗನ ಹೆಸರು ಹೇಳಿರಬಹುದು. ಆದರೆ, ನಾನು ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಅಂತ ಹೇಳಿದ್ದೇನೆ. ಅದೆಲ್ಲ ವಿಷಯವೂ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಜೊತೆಗೆ ಚರ್ಚೆಯಾಗಲಿದೆ ಎಂದು ಹೇಳಿದ್ದರು.