ಚನ್ನಪಟ್ಟಣ: ರಾಮನಗರ ಸೇರಿದಂತೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಚನ್ನಪಟ್ಟಣ ಉಪ ಚುನಾವಣೆಯಲ್ಲಿಯೂ (channapatna by election) ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಚನ್ನಪಟ್ಟಣದಲ್ಲಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು; ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ₹3,000,₹5000 ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು.
ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಬೆಂಗಳೂರಿನ ಲುಲು ಮಾಲ್ ಗೆ ಹೋಗಿ ಕೊಡಿ, ಅಲ್ಲಿಗೆ ಹೋಗಿ ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲುಲು ಮಾಲ್ ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ ಎಂದು ಕೂಪನ್ ಅಕ್ರಮವನ್ನು ಕೇಂದ್ರ ಸಚಿವರು ಎಳೆ ಎಳೆಯಾಗಿ ಬಿಡಿಸಿಟ್ಟರು.
ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಕೇಂದ್ರ ಸಚಿವರು ಮನವಿ ಮಾಡಿದರು.