ಬೆಂಗಳೂರು: ರಾಜ್ಯದಲ್ಲಿ ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾವಿ ಮೂರು ಕ್ಷೇತ್ರಗಳ ಉಪಚುನಾವಣೆಯ ಕಾವು ತೀವ್ರವಾಗಿದೆ. ಇದರ ನಡುವೆಯೇ ಮತ್ತೆ ಅಪರೇಷನ್ ಹಸ್ತದ ವಿಚಾರ ಸದ್ದು ತೀವ್ರವಾಗಿದೆ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಉಪಚುನಾವಣೆಯ ನಂತರ ಹಲವು ಬಿಜೆಪಿಯ ನಾಯಕರು, ಕಾಂಗ್ರೆಸ್‌ಗೆ ಸೇರಲಿದ್ದಾರೆ. ಅನೇಕ ಅತ್ಮೀಯರು ಸಂಪರ್ಕದಲ್ಲಿದ್ದು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರಲು ಇಚ್ಚಿಸಿದ್ದಾರೆ ಎಂದು ಇಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಲ್ಲಿ ಬಹಳ ಜನ ಸ್ನೇಹಿತರು ಇದ್ದಾರೆ. ಅವರ ಹಿತವನ್ನು ಕಾಪಾಡಬೇಕಿದೆ. ಉಪಚುನಾವಣೆ ಆದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬರುವ ಸಿದ್ದತೆ ಇದೆ. ಈ ಕುರಿತು ರಾಷ್ಟ್ರೀಯ ಅಧ್ಯಕ್ಷರ ಜೊತೆ ಮತ್ತು ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ ಅವರು, ದಸರೆ, ದೀಪಾವಳಿ, ಮುಂದಿನ ಪಂಚಮಿ.. ಈ ತಿಥಿಗಳು ಏನಿವೆ ಅಲ್ವಾ ಅವೆಲ್ಲ ಬಿಜೆಪಿಯವರಿಗೆ ಬಹಳ ಇಷ್ಟ. ಇನ್ ಮೂರುವರೆ ವರ್ಷನೂ ಅದನ್ನೆ ಹೇಳ್ತಾರೆ, ಮೂರುವರೆ ವರ್ಷದ ನಂತರ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ತಿಂಗಳ ನಂತರ ಪುನಃ ಇದನ್ನೇ ಶುರು ಮಾಡ್ತಾರೆ.. ಬಿಜೆಪಿಯವರಿಗೆ ಇದುನ್ ಬಿಟ್ರೆ ಹೇಳೋಕ್ ಬೇರೆ ಏನು ಇರಲ್ಲ ಎಂದು ಲಕ್ಷ್ಮಣ ಸವದಿ ಲೇವಡಿ ಮಾಡಿದರು.
ವ್ಯಾಪಕ ಚರ್ಚೆ: ಬಿಜೆಪಿ ಶಾಸಕರಾದರೂ ಹೆಚ್ಚೆಚ್ಚು ಕಾಂಗ್ರೆಸ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಾಸಕ ಎಸ್‌ಟಿ ಸೋಮಶೇಖರ್ ಅವರೂ ಇತ್ತೀಚೆಗೆ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂದಿದ್ದರು. ಅತ್ತ ಶಿವರಾಂ ಹೆಬ್ಬಾರ್ ಈಗಾಗಲೇ ಬಿಜೆಪಿಯಿಂದ ವಿಮುಖವಾಗಿದ್ದು ಒಂದು ಕಾಲನ್ನು ಹೊರಗಿಟ್ಟಿದ್ದಾರೆ.
ಸವದಿ ಹಾಗೂ ಸೋಮಶೇಖರ್ ಹೇಳಿರುವ ಆ ನಾಯಕರು ಯಾರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಗುಟ್ಟು ಸದ್ಯಕ್ಕೆ ರಟ್ಟಾಗಿಲ್ಲ ಆದರೆ ಅಪರೇನ್ ಹಸ್ತ ಆಗುವುದು ಉಪಚುನಾವಣೆಯ ನಂತರ ಪಕ್ಕಾ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಈ ಇಬ್ಬರ ನಾಯಕರ ಹೇಳಿಕೆಗಳು ಸಾಕಷ್ಟು ಪುಷ್ಟಿಯೂ ನೀಡಿದೆ.