ಮಾಸ್ಕೊ: ಮಾರಣಾಂತಿಕ ರೋಗ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಶುಭಸುದ್ದಿ (cancer vaccine) ದೂರದ ರಷ್ಯಾದಿಂದ ಹೊರಬಿದ್ದಿದೆ.
ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ನೋವಿಲ್ಲದಂತೆ ಸುಲಭದಲ್ಲಿ ನಡೆಯುವಂತೆ ಮಾಡುವಂತಹ ಔಷಧ ಯಾವಾಗ ಬರುವುದೋ ಎಂದು ಇಡೀ ವಿಶ್ವದ ಕ್ಯಾನ್ಸರ್ ರೋಗಿ ಗಳ ಕಾಯುವಿಕೆ ಕೊನೆಗೊಳ್ಳುವ ಸಮಯ ಬಂದಿದೆ. ರೋಗಿಗಳನ್ನು ಇನ್ನಿಲ್ಲದಂತೆ ನೋಯಿಸಿ, ಪೀಡಿಸಿ ಸಾವು ತರುತ್ತಿದ್ದ ಕ್ಯಾನ್ಸರ್‌ನ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿಯಾಗಿದೆ.
ಕ್ಯಾನ್ಸರ್ ಕೋಶಗಳನ್ನು ಪೂರ್ಣವಾಗಿ ನಾಶಪಡಿಸುವಂತಹ ‘ಎಂಆರ್‌ಎನ್‌ಎ’ ಆಧಾರಿತ ಚಿಕಿತ್ಸಕ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ರಷ್ಯಾ ಬುಧವಾರ ಪ್ರಕಟಿಸಿದೆ.
ಮಹತ್ವದ ಈ ಲಸಿಕೆ 2025ರಲ್ಲಿ ಚಿಕಿತ್ಸೆಗೆ ಲಭ್ಯವಾಗಲಿದೆ. ಎಲ್ಲ ಕ್ಯಾನ್ಸರ್ ರೋಗಿಗಳಿಗೂ ಉಚಿತವಾಗಿ ಸಿಗಲಿದೆ ಎಂದು ರಷ್ಯಾ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ‘ಟಿಎಎಸ್‌ಎಸ್’ ಪ್ರಕಟಿಸಿದೆ.
ರಷ್ಯಾ ವಿಜ್ಞಾನಿಗಳು ಕ್ಯಾನ್ಸರ್ ಕೋಶಗಳನ್ನು ಪೂರ್ಣವಾಗಿ ನಾಶಪಡಿಸುವಂತಹ ‘ಎಂಆರ್ ಎನ್‌ಎ’ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಈ ಲಸಿಕೆಯು ರೋಗಿಯ ದೇಹದಲ್ಲಿ ಪ್ರತಿರಕ್ಷಣಾ ಪ್ರಕ್ರಿಯೆ ನಡೆಯುವುದಕ್ಕೆ ಅತ್ಯಗತ್ಯವಾದ ಮೆಸೆಂಜರ್ ಆರ್ ಎನ್‌ಎ(ಎಂಆರ್‌ಎನ್‌ಎ) ಎಂಬ ಅಣುವಿನ ನಕಲನ್ನು ಬಳಸುತ್ತದೆ ಎಂದು ಲಸಿಕೆಗೆ ಸಂಬಂಧಿಸಿದ ವರದಿಯಲ್ಲಿ ವಿವರಿಸಲಾಗಿದೆ.
ಟ್ರಯಲ್ ಯಶಸ್ವಿ
ಲಸಿಕೆಯ ಕ್ಲಿನಿಕಲ್ ಟ್ರಯಲ್ ಬಗ್ಗೆ ಗಮಾಲೆಯ ‘ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ’ ಸಂಸ್ಥೆ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸಂಬರ್ಗ್ ವಿವರಿಸಿದ್ದಾರೆ.
‘ಲಸಿಕೆಯು ಕ್ಯಾನ್ಸರ್ ಗಡ್ಡೆಯ(ಟ್ಯೂಮರ್) ಬೆಳವಣಿಗೆ ಮತ್ತು ಸಂಭಾವ್ಯ ಮೆಟಾಸ್ಟೇಸ್ ಗಳನ್ನು ಸಮರ್ಥವಾಗಿ ನಿಗ್ರಹಿಸುತ್ತದೆ. ಅ ಅಂಶವನ್ನು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಕಂಡುಕೊಳ್ಳಲಾಗಿದೆ ಎಂದಿದ್ದಾರೆ.
ಉಚಿತ ಹಂಚಿಕೆ
ಕ್ಯಾನ್ಸರ್ ಚಿಕಿತ್ಸಕ ಲಸಿಕೆಯನ್ನು 2025 ವರ್ಷಾರಂಭದಲ್ಲಿ ಹೊರಬಿಡಲಾಗುವುದು. ಜೀವರಕ್ಷಕವಾದ ಈ ಲಸಿಕೆಯನ್ನು ಸದ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ. ಮಾರಕ ಕಾಯಿಲೆ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಉಚಿತವಾಗಿ ನೀಡಲಾಗುವುದು.
ರೋಗಿಗಳ ಚಿಕಿತ್ಸೆಗೇ ಆದ್ಯತೆ ಮೇರೆಗೆ ಬಳಸಲಾಗುವುದು ಎಂದು ರಷ್ಯಾ ಆರೋಗ್ಯ ಸಚಿವಾಲಯ ಘೋಷಿಸಿದೆ.