
ಮೈಸೂರು: ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಡಲು ನಗರಪಾಲಿಕೆ ಮುಂದಾಗಿದ್ದು, ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ( Pratap Simha) ಸಿಎಂ ಪರ ಬ್ಯಾಟ್ ಬಳಸಿದ್ದಾರೆ.
ಸಿದ್ದರಾಮಯ್ಯ ಹೆಸರಿಡುವ ಪ್ರಸ್ತಾವನೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನವರು ಯಾರೂ ವಿರೋಧ ಮಾಡಬಾರದು. ಕವಿಗಳು, ಸಾಧಕರ ಹೆಸರು ಇಡುವುದು ವಾಡಿಕೆ. ಮೈಸೂರಿಗೆ ಆಶ್ರಯದಾತರಾಗಿ ಬಂದವರು ಚಾಮರಾಜ ಒಡೆಯರ್, ಕೃಷ್ಣರಾಜ ಒಡೆಯರ್ ಅವರ ಹೆಸರು ಇಟ್ಟಿದ್ದರು. ದಿವಾನರ ಹೆಸರುಗಳನ್ನು ಇಟ್ಟಿದ್ದಾರೆ.
ನಾನು ಸೈದ್ಧಾಂತಿಕವಾಗಿ ಇವತ್ತು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತೇನೆ. ಆದರೆ, ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಇದೆ. ಜಯದೇವ ಆಸ್ಪತ್ರೆ ಕಟ್ಟಲು ಮಾಜಿ ಶಾಸಕ ವಾಸಣ್ಣ ಹಾಗೂ ಸಿದ್ದರಾಮಯ್ಯ ನವರ ಕೊಡುಗೆ ದೊಡ್ಡದು.
40 ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಸಾಧಕರನ್ನು ಗುರುತಿಸುವ ವಿಚಾರದಲ್ಲಿ ಪಕ್ಷ ಭೇದ ಬೇಡ. ಸಾಧನೆಗೆ ಪಕ್ಷ ತರಬೇಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						