ಚಿಕ್ಕಬಳ್ಳಾಪುರ: ಟ್ಯಾಂಕರ್‌ನಿಂದ ಕೆಮಿಕಲ್ (Chemical) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಲಾರಿಯಿಂದ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮೃತ ಕಾರ್ಮಿಕನನ್ನು ಬಿಹಾರ ಮೂಲದ ಮಹಮದ್ ರಜೀಕ್ (33) ಎಂದು ಗುರ್ತಿಸಲಾಗಿದೆ.
ಘಟನೆಯಲ್ಲಿ ವಿಕಾಸ್ ಹಾಗೂ ಸೋನು ಎಂಬ ಕಾರ್ಮಿಕರು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಮದ್ ರಜೀಕ್ ಕಳೆದ 5 ವರ್ಷಗಳ ಹಿಂದೆ ಹೆಂಡತಿಯೊಂದಿಗೆ ಕೂಲಿ ಕೆಲಸ ಅರಸಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ. ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಶ್ರೀನಿವಾಸಮೂರ್ತಿ ಎಂಬುವವರಿಗೆ ಸೇರಿದ ರಾಮ್ ಕೀ(ರಾಮ್ ರಸಾಯನಿಕ್) ಕೆಮಿಕಲ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಜೊತೆ ಸೋನು ಹಾಗೂ ವಿಕಾಸ್ ಸಹ ಕೆಲಸ ಮಾಡುತ್ತಿದ್ದರು.
ಬುಧವಾರ ಸಂಜೆ ಫ್ಯಾಕ್ಟರಿಯ ಕೆಮಿಕಲ್‌ವೇಸ್ಟ್ ತುಂಬಿದ್ದ ಟ್ಯಾಂಕರ್‌ನ ಮೇಲ್ಬಾಗದ ಕ್ಯಾಪ್ ಓಪನ್ ಆಗಿದೆ. ಇದರಿಂದ ಕೆಮಿಕಲ್ ಸೋರಿಕೆಯಾಗಿ ಏಕಾಏಕಿ ಮೂವರಿಗೂ ಉಸಿರುಗಟ್ಟಿದಂತಾಗಿದೆ. ತಲೆ ಸುತ್ತು ಬಂದು ಲಾರಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಮದ್ ರಜೀಕ್ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.
ಮಾಲಿಕನ ವಿರುದ್ದ ದೂರು: ವಿಕಾಸ್ ಹಾಗೂ ಸೋನು ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಲಾರಿ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ವಿಷಯ ತಿಳಿದ ನಂದಿಗಿರಿಧಾಮ ಪೋಲಿಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.
ಘಟನೆ ಬಗ್ಗೆ ಮೃತನ ಸಂಬಂಧಿಕರು ದೂರು ನೀಡಿದ್ದು, ಕಾರ್ಮಿಕ ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದ ಅಧಿಕಾರಿಗಳು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಕಳೆದ 14 ವರ್ಷಗಳ ಹಿಂದೆ ಇದೇ ರಾಮ್ ಕೀ (ರಾಮ್ ರಸಾಯನಿಕ್) ಕಾರ್ಖಾನೆಯಿಂದ ಕೆಮಿಕಲ್ ಸೋರಿಕೆಯಾಗಿ ಅಗಲಗುರ್ಕಿ ಬಿಜಿಎಸ್ ಇಂಗ್ಲೀಷ್ ಶಾಲೆಯವರೆಗೂ ಗಾಳಿಯಲ್ಲಿ ಆವರಿಸಿತ್ತು. ಇದರಿಂದ ಹಲವಾರು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಗೆದಾಖಲಾಗಿದ್ದರು. ಆಗ ಕಾರ್ಖಾನೆಯನ್ನು ಕೆಲ ದಿನಗಳ ಕಾಲ ಮುಚ್ಚಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						