ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಪ್ರಸಿದ್ಧ ಹುಲುಕುಡಿ ಕ್ಷೇತ್ರದಲ್ಲಿನ ಅನ್ನದಾಸೋಹ ಭವನದಲ್ಲಿ ಅಳವಡಿಸಲಾಗಿದ್ದ ಹುಂಡಿಯನ್ನು ಕಳ್ಳರು ಹೊಡೆದಿದ್ದಾರೆ.
ಇತ್ತೀಚೆಗಷ್ಟೇ ಈ ಕ್ಷೇತ್ರದಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಸಲಾಗಿತ್ತು.
ಈ ಬೆನ್ನಲ್ಲೇ ಶನಿವಾರ ರಾತ್ರಿ ಅನ್ನದಾಸೋಹ ಭವನಕ್ಕೆ ನುಗ್ಗಿರುವ ಕಳ್ಳರು, ಹುಂಡಿಗೆ ಅಳವಡಿಸಲಾಗಿದ್ದ ಬೀಗ ಮುರಿದು ಕಾಣಿಕೆ ಹಣವನ್ನು ದೋಚಿ, ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ದಾಸೋಹಕ್ಕೆ ಅಡಿಗೆ ಮಾಡಲು ತೆರಳಿದಾಗ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಜಾತ್ರಾ ಮಹೋತ್ಸವ ನಡೆದಿರುವುದರಿಂದ ಹುಂಡಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿರ ಬಹುದು ಎಂದು ದೇವಾಲಯದ ಟ್ರಸ್ಟಿ ಚನ್ನೆಗೌಡ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೊಡ್ಡಬೆಳವಂಗಲ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮೀ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Doddaballapura: Thieves broke the Hundi of Hulukudi..!