ದೊಡ್ಡಬಳ್ಳಾಪುರ: ಎರಡು ತಲೆಯ ಹಾವುಗಳು (Two headed snake) ನೋಡುವುದಕ್ಕೆ ಸಿಗುವುದು ತುಂಬಾನೇ ಅಪರೂಪ. ಅದರಲ್ಲೂ ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತುಂಬಾನೇ ವಿರಳ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈಗ ಅಪರೂಪಕ್ಕೆ ಎಂಬಂತೆ ತಾಲೂಕಿನ ಹೊಸಹಳ್ಳಿ ರಸ್ತೆಯ ಮಾಕಳಿ ಬೆಟ್ಟದಲ್ಲಿ ಈ ರೀತಿಯ ಎರಡು ತಲೆಯ ಹಾವೊಂದು ಕಾಣಿಸಿಕೊಂಡಿದೆ.
ಶಿಕ್ಷಕ ಹರೀಶ್ ಕೆವಿ ಎನ್ನುವವರು ಹೊಸಹಳ್ಳಿ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎರಡು ತಲೆ ಹಾವು ರಸ್ತೆ ದಾಟುತ್ತಿರುವುದು ಕಂಡುಬಂದಿದೆ.
ಕೂಡಲೇ ಹರೀಶ್ ಅವರು ಬೈಕ್ ನಿಲ್ಲಿಸಿ, ತಮ್ಮ ಮೊಬೈಲ್ ನಲ್ಲಿ ಹಾವು ಸಾಗುತ್ತಿರುವುದನ್ನು ಸೆರೆಹಿಡಿದಿದ್ದಾರೆ.
ಹಾವು ರಸ್ತೆ ಮೂಲಕ ಸಾಗುತ್ತಿರುವುದನ್ನು ಕಂಡ ಅನೇಕ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ ಆಶ್ಚರ್ಯಕರವಾಗಿ ನೋಡಿದ್ದಾರೆ.
ಮಾಕಳಿ ಬೆಟ್ಟದ ಸಾಲಿನಲ್ಲಿ ಅಪಾರ ವನ್ಯಜೀವಿಗಳಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಉಂಟಾಗುವ ಬೆಂಕಿ ಅವಘಡಗಳಿಂದ ಅಮೂಲ್ಯ ವನ್ಯ ಸಂಪತ್ತು ಬೆಂಕಿಗೆ ಆಹುತಿಯಾಗುತ್ತಿದೆ.
ಈಗಾಗಲೇ ಬೇಸಿಗೆಯ ಬಿಸಿ ತಟ್ಟಲಾರಂಭಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡ್ಗಿಚ್ಚು ಹರಡದಂತೆ ತಡೆಯಲು ತ್ವರಿತವಾಗಿ ಕ್ರಮಕೈಗೊಳ್ಳಬೇಕಿದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಇನ್ನೂ ಎರಡು ತಲೆ ಎಂದರೆ ಈ ಹಾವಿಗೆ ಒಂದೇ ಕಡೆ ಎರಡು ತಲೆಗಳಿವೆ ಅಂತ ತುಂಬಾ ಜನರು ಅಂದುಕೊಳ್ಳಬಹುದು. ಆದರೆ ಈ ಹಾವು ತನ್ನ ಬಾಲವನ್ನು ಸಹ ಹೆಡೆಯಂತೆ ಎತ್ತಬಹುದಾದ ಸಾಮರ್ಥ್ಯವನ್ನು ಹೊಂದಿದೆಯಂತೆ, ಆದ್ದರಿಂದ ಇದಕ್ಕೆ ಹಾಗೆ ಕರೆಯುತ್ತಾರೆ ಅಂತ ಹೇಳಲಾಗುತ್ತಿದೆ.