ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ (BJP) ನಡೆಸಿದ ಅಹೋರಾತ್ರಿ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾದ ಕುರಿತು ನಿರೀಕ್ಷೆಯಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Banana Gouda Patila Yatnal) ಲೇವಡಿ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಜನರಿಗಾಗಿ ಅಲ್ಲ. ಅವರ ಮಗನ ಕುರ್ಚಿಯನ್ನು ಗಟ್ಟಿ ಮಾಡಲಿಕ್ಕಾಗಿ ಮಾತ್ರ ಎಂದು ಕುಟುಕಿದ್ದಾರೆ.
ತಾನು ಸಾಯೋಕಿಂತ ಮುಂಚೆ, ತನ್ನ ನಂತರ ಮಗನ ಮುಖ್ಯಮಂತ್ರಿಯಾಗಿ ನೋಡಬೇಕು, ಇನ್ನಷ್ಟು ಕರ್ನಾಟಕವನ್ನು ಲೂಟಿ ಮಾಡಬೇಕು..ಈಗ ಬರೀ ಮಾರಿಷಸ್, ದುಬಯ್ ಅಲ್ಲಿ ಮಾತ್ರ ಆಸ್ತಿ ಇದೆ. ಮುಂದೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಆಸ್ತಿ ಮಾಡಬೇಕು ಎಂಬುದು ಅವರ ಉದ್ದೇಶ.
ಇದಕ್ಕಾಗಿ ಅಷ್ಟು ವಯಸ್ಸಾದರೂ ಮನೆಯಲ್ಲಿ ಕೂರಲಾಗದೆ, ಹೊರಗೆ ಬಂದು ಹೋರಾಟ ಮಾಡ್ತಾ ಇರೋದು ಈ ರಾಜ್ಯದ ಬಡವರ ಸಲುವಾಗಿ ಅಲ್ಲ, ರೈತರ ಸಲುವಾಗಿ ಅಲ್ಲ, ತನ್ನ ಮಗನ ಕುರ್ಚಿ ಗಟ್ಟಿ ಮಾಡಲಿಕ್ಕೆ.
ಏಕೆಂದರೆ ಇದೇ ರೀತಿ ಬ್ಲಾಕ್ ಮೇಲ್ ಮಾಡಿ, ನನ್ನ ಮಗನ ತಗುದ್ರೆ, ಯತ್ನಾಳ್ ನ ಉಚ್ಚಾಟನೆ ಮಾಡದಿದ್ದರೆ ನೇಣಾಕೋತ್ತೀನಿ ಅಂತ ಅಮಿತ್ ಶಾಗೆ ಬ್ಲಾಕ್ ಮೇಲ್ ಮಾಡುವಂತ ಕೆಳಮಟ್ಟದ ರಾಜಕಾರಣ ಮಾಡಿ, ಈ ಇಳಿವಯಸ್ಸು ಎಣಿಸ್ತಾ ಇದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಲಿಂಗಾಯತನೇ ಅಲ್ಲ ಸಾಕ್ಷಿ ಇದ್ರೆ ಕೊಡ್ಲಿ ಯಡಿಯೂರಪ್ಪ, ಬೂಕನಕೆರೆಯಲ್ಲಿ ಶಾಲೆಯ ದಾಖಲೆ ಪರಿಶೀಲನೆ ಮಾಡ್ಲಿ, ಸುಮ್ಮನೆ ವೀರಶೈವ ಲಿಂಗಾಯತ ಅಂತ ಹೇಳ್ಕೊಂಡು, ನಾಲ್ಕು ಮಠಾಧೀಶರನ್ನು ಹಿಡ್ಕೊಂಡು, ದುಡ್ ಕೊಟ್ಟು ಅವರಿಂದ ಯಡಿಯೂರಪ್ಪನ ಬಿಟ್ ಬಿಟ್ರೆ ಲಿಂಗಾಯತರು, ವೀರಶೈವರು ಬಿಜೆಪಿನ ಬಿಟ್ ಬಿಡ್ತಾರೆ ಅಂತ ಹೇಳಿಕೆ ಕೊಡಿಸೋದು. ನಂತರ ಅಪ್ಪ, ಮಕ್ಕಳು ಮಜಾ ಮಾಡೋದು ಎಂದು ಯತ್ನಾಳ್ ಕಿಡಿ ಕಾರಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						