ಬೆಂಗಳೂರು: ಅತ್ಯಾಚಾರ ಸಂತ್ರಸ್ತೇ ಅಪಹರಣ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ (Bhavani Revanna) ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದ ಷರತ್ತುಗಳನ್ನು ಹೈಕೋರ್ಟ್ ಸಡಿಲಿಸಿದೆ.
ಆದರೆ, ಅಪಹರಣ ಮತ್ತು ಅತ್ಯಾಚಾರಕ್ಕೊಳ ಗಾಗಿದ್ದ ಸಂತ್ರಸ್ತೆಯ ಹಾಗೂ ಇತರ ಸಾಕ್ಷಿಗಳ ಮನೆ ಗಳಿಂದ 500 ಮೀಟರ್ ವ್ಯಾಪ್ತಿಯೊಳಕ್ಕೆ ಹೋಗ ದಂತೆ ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಿ ಆದೇಶಿಸಿದೆ.
ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳನ್ನು ಸಡಿಲಿಸಲು ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರು ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ತನಿಖಾಧಿಕಾರಿಗಳು ಜಾಮೀನು ರದ್ದುಕೋರಿ ಹೈಕೋರ್ಟ್ ಮೊರೆ ಹೋಗಬಹು ದಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಭವಾನಿ ಪರ ವಕೀಲರು, ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಐಪಿಸಿ ಸೆಕ್ಷನ್ 364ಎ (ಅಪಹರಣ) ಅನ್ನು ಕೈಬಿಡಲಾಗಿದೆ. ಭವಾನಿ ಅವರು 6 ತಿಂಗಳ ಹಿಂದೆ ಪಡೆದಿರುವ ನಿರೀಕ್ಷಣಾ ಜಾಮೀನು ಷರತ್ತುಗಳನ್ನು ಉಲ್ಲಂಘಿ ಸಿಲ್ಲ. ಪ್ರಕರಣ ದಲ್ಲಿನ ಉಳಿದ ಆರು ಆರೋಪಿಗಳಿಗೆ ಎಲ್ಲಾದರೂ ಓಡಾಡಲು ಅನುಮತಿ ನೀಡಲಾಗಿದೆ. ಮೊದಲನೇ ಆರೋಪಿ ಎಚ್.ಡಿ ರೇವಣ್ಣಗೆ ಮಾತ್ರ ಕೆ.ಆರ್. ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೇ, ಕಳೆದ ವರ್ಷ ಹಾಸನದಲ್ಲಿ ದೇವಸ್ಥಾನಕ್ಕೆ ತೆರಳಲು ನೀಡಿದ್ದ 10 ದಿನಗಳ ಅನುಮತಿ ಯಲ್ಲಿಯೂ ಯಾವುದೇ ಉಲ್ಲಂಘನೆಯಾಗಿಲ್ಲ. ಭವಾನಿ ಅವರಿಗೆ ಯಾವುದೇ ತೆರನಾದ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹೀಗಾಗಿ ಷರತ್ತುಗಳನ್ನು ಸಡಿಲಿಸ ಬೇಕು ಎಂದು ಅವರು ಕೋರಿದರು ಎಂದು ವರದಿಯಾಗಿದೆ.