ಬೀದರ್ (Harithalekhani): ಕರ್ತವ್ಯದಲ್ಲಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜಾತಿ ನಿಂದನೆ ಮಾಡಿ ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇರೆಗೆ ಹೊನ್ನಿಕೇರಿ ಗಸ್ತು ಅರಣ್ಯ ಪಾಲಕ ದಸ್ತಗಿರಿ ಸಾಬ್ ಎಂಬುವರನ್ನು ಅಮಾನತುಗೊಳಿಸಿ (Suspend) ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್.ಎಮ್. ಆದೇಶಿಸಿದ್ದಾರೆ.
ಇಲಾಖಾ ವಿಚಾರಣೆ ಬಾಕಿ ಇರಿಸಿ, ಕರ್ನಾಟಕ ಸಿವಿಲ್ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1) (ಡಿ) ಅನ್ವಯ ಗುರುವಾರ (ಏ.17) ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ದೃಶ್ಯಾವಳಿಗಳು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಈ ಕ್ರಮ ಜರುಗಿಸಲಾಗಿದೆ.
ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021ರ ನಿಯಮ (3) ಉಲ್ಲಂಘಿಸಿ ಕರ್ತವ್ಯದಲ್ಲಿ ಅಶಿಸ್ತು ತೋರಿದ್ದಾರೆ.
ಸದರಿ ಘಟನೆಯ ಬಗ್ಗೆ ಕೂಲಂಕಶ ತನಿಖೆ ನಡೆದು, ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾಗಿದೆ. ದಸ್ತಗಿರಿ ಸಾಬ್ ಅದೇ ಸ್ಥಳದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗುವ ಸಂಭವವಿದೆ. ಈ ಕಾರಣಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.