ಬೆಂಗಳೂರು (Harithalekhani): ಬಿಜೆಪಿ ಕೌನ್ಸಿಲರ್ ವಂಚನೆ ಎಸಗಿದ್ದಲ್ಲದೆ, ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ (BJP) ಕಾರ್ಯಕರ್ತನೊಬ್ಬ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತ 35 ವರ್ಷದ ಪ್ರವೀಣ್ ಗೌಡ ಬೇಲೂರು ಮೃತ ದುರ್ದೈವಿ.
ಮೃತನು ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಹಾಗೂ ಕೌನ್ಸಿಲರ್ ಭಾಗ್ಯಮ್ಮ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆ.
ಸಮಂದೂರು ಕಿರಣ್, ಗೋಕುಲ್ ಫ್ಯಾಷನ್ಸ್ ಹರೀಶ್, ಭಾಸ್ಕರ್, ನಾರಾಯಣಪ್ಪ ದೊಡ್ಡಹಾಗಡೆ ಮಧುಗೌಡ, ಸರವಣ ಇವರೆಲ್ಲರೂ ನನ್ನ ಸಾವಿಗೆ ಕಾರಣ.
ಇವರ ಪೈಕಿ ಕಿರಣ್ ಅತಿಮುಖ್ಯ ಕಾರಣ. ಈತ ಹಲವು ಹೆಣ್ಣುಮಕ್ಕಳಿಗೆ ಕಿರುಕುಳವನ್ನೂ ನೀಡಿದ್ದಾನೆ. ಹಣದ ವಿಚಾರಕ್ಕೆಂದು ಕರೆಸಿ ಹಲ್ಲೆ ನಡೆಸಿದ್ದಾನೆ. ಈತ ಮಾಡಿರುವ ಅಪರಾಧಗಳು ನನ್ನ ತಲೆಯ ಮೇಲೆ ಬಂದಿವೆ. ಯಾರನ್ನೂ ಬಿಟ್ಟರೂ ಇವನನ್ನು ಬಿಡಬೇಡಿ ಎಂದು ಪ್ರವೀಣ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದು, ಬಳಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಲ್ಲದೆ ಆನೇಕಲ್ ಬಿಜೆಪಿ ಮಂಡಲಾಧ್ಯಕ್ಷ ಮುನಿರಾಜು ಗೌಡ ಹಾಗು ಕೌನ್ಸಿಲರ್ ಭಾಗ್ಯಮ್ಮ ಮತ್ತವರ ಪತಿ ಶ್ರೀನಿವಾಸ್ ನನ್ನನ್ನು ಬಂಧನದಲ್ಲಿಟ್ಟು ಎರಡು ತಾಸು ಹಲ್ಲೆಯೆಸಗಿದ್ದಾರೆ.
ನಾನು ಸತ್ತರೂ ನನ್ನ ದೇಹದ ಮೇಲಿರುವ ಗಾಯಗಳನ್ನು ನೋಡಿ ಪೊಲೀಸರು ನ್ಯಾಯ ಕೊಡಿಸಬೇಕೆಂದು ಪ್ರವೀಣ್ ಸಾಯುವ ಮುನ್ನ ಮನವಿ ಮಾಡಿಕೊಂಡಿದ್ದಾರೆ.