ಮಂಗಳೂರು: ಬಜಪೆ ಕಿನ್ನಿಪದವು ಸಮೀಪ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ಕೊಚ್ಚಿಕೊಲೆ (Murder) ಮಾಡಿದ್ದು, ಘಟನೆಯಿಂದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸುಹಾಸ್ ಶೆಟ್ಟಿ 2022ರಲ್ಲಿ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬೆನ್ನಲ್ಲೇ ಫಾಜಿಲ್ ಕೊಲೆಯಾಗಿತ್ತು. ರಾತ್ರಿ 8.30ರ ಸುಮಾರಿಗೆ ಕಿನ್ನಿಪದವು ಪೇಟೆಯಲ್ಲಿ ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರಿಗೆ ಇನ್ನೊಂದು ವಾಹನ ಡಿಕ್ಕಿ ಹೊಡೆದಿತ್ತು. ಬಳಿಕ ಮಾತಿನ ಚಕಮಕಿ ಆರಂಭವಾಗಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಜಯೇಂದ್ರ ವಾಗ್ದಾಳಿ
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಆಪೋಶನ ಮಾಡಿಕೊಂಡಿರುವ ಗೂಂಡಾಗಳು, ಸಮಾಜಘಾತುಕ ಶಕ್ತಿಗಳು ಕೊಲೆ, ಸುಲಿಗೆ, ಅತ್ಯಾಚಾರ ಹಾಗೂ ದೌರ್ಜನ್ಯಗಳಲ್ಲಿ ನಿರತವಾಗಿವೆ ಎಂದು ಘಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಭೀಕರ ಕೊಲೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಮತೀಯವಾದಿ ಹಿಂದೂ ವಿರೋಧಿ ರಕ್ಕಸರು ನಡು ರಸ್ತೆಯಲ್ಲೇ ಅಟ್ಟಹಾಸಗೈದು ಕೊಲೆಗೈಯುತ್ತಿರುವ ದೃಶ್ಯ ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ, ಈ ಅಮಾನುಷ ಘಟನೆಯನ್ನು ತೀವ್ರವಾಗಿ ಖಂಡಿಸುವೆ.
ಸುಹಾಸ್ ಬರ್ಬರ ಕೊಲೆಗೀಡಾಗಿರುವ ಘಟನೆಯ ಹಿನ್ನೆಲೆ ಪೂರ್ವನಿಯೋಜಿತ ಎನ್ನುವುದು ಸುಸ್ಪಷ್ಟ. ಈ ಹಿನ್ನೆಲೆಯಲ್ಲಿ ಇದು ಗುಪ್ತಚರ ಇಲಾಖೆಯ ವೈಫಲ್ಯವೋ? ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಹೊಣೆಗೇಡಿತನ ಕಾರಣವೋ? ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ.
ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಹಿಂದೂ ಕಾರ್ಯಕರ್ತನನ್ನು ಕೊಚ್ಚಿಕೊಂದಿರುವ ಮಂಗಳೂರು ಘಟನೆಯನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣುತ್ತಿದೆ.
ಮೇಲಿಂದ ಮೇಲೆ ಕರ್ನಾಟಕದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು ರಾಜ್ಯದ ಜನತೆ ತೀವ್ರ ಆತಂಕಿತರಾಗಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕೊಲೆಗಡುಕರು, ದುಷ್ಟರ ಕೈಗೆ ಒಪ್ಪಿಸಿರುವಂತೆ ಕಾಣುತ್ತಿರುವ ಈ ಕಾಂಗ್ರೆಸ್ ಸರ್ಕಾರದ ಮುಷ್ಟಿಯಿಂದ ರಾಜ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸುವೆ. ಮೃತ ಕಾರ್ಯಕರ್ತನ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಕಾರ್ಯಕರ್ತ ಸುಹಾಸ್ ಅವರ ಕುಟುಂಬ ವರ್ಗದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.