Harithalekhani story for the day: ಅಶ್ವತ್ಥಾಮನು ದ್ವಾಪರ ಯುಗ ಕಾಲದ ಕಥೆಯನ್ನೊಳಗೊಂಡ ಮಹಾಕಾವ್ಯ ‘ಮಹಾಭಾರತ’ ಕಾಲದ ವ್ಯಕ್ತಿ. ಈತ ಕೌರವರು ಹಾಗೂ ಪಾಂಡವರಿಗೆ ಯುದ್ಧ ವಿದ್ಯೆ ಕಲಿಸಿದ ಗುರುವೂ, ಕುರು ವಂಶದ ರಾಜಗುರುವೂ ಆದ ದ್ರೋಣಾಚಾರ್ಯರ ಪುತ್ರ..
ಅಶ್ವತ್ಥಾಮ ಚಿರಂಜೀವಿ ಎಂದು ಪುರಾಣಗಳು ವಿವರಿಸುತ್ತವೆ. ಈ ಕಾರಣದಿಂದ ಆತನಲ್ಲಿರುವ ಅತಿಮಾನುಷ ಶಕ್ತಿಯಿಂದಾಗಿ ಈಗಲೂ ಈತ ಬದುಕಿರುವುದಾಗಿ ಹಲವರು ನಂಬುತ್ತಾರೆ.
ದ್ರೋಣಾಚಾರ್ಯರು ರಾಜಗುರುವಾಗಿದ್ದ ಕಾರಣ, ಹಸ್ತಿನಾವತಿಯೊಂದಿಗಿನ ತನ್ನ ಬದ್ಧತೆಯಿಂದಾಗಿ ಮಹಾಭಾರತ ಯುದ್ಧ (ಕುರುಕ್ಷೇತ್ರ) ಕಾಲದಲ್ಲಿ ಪಾಂಡವರ ವಿರುದ್ಧ ಕೌರವರ ಪಕ್ಷವಹಿಸಿ ಯುದ್ಧ ನಡೆಸಿದರು.
ಯುದ್ಧ ಸಂದರ್ಭದಲ್ಲಿ ದ್ರೋಣಾಚಾರ್ಯ ಹಾಗೂ ಪುತ್ರ ಅಶ್ವತ್ಥಾಮ ಸೇರಿ ಶತ್ರುಪಕ್ಷವಾದ ಪಾಂಡವರ ಸೇನೆಯನ್ನು ಬೃಹತ್ ಸಂಖ್ಯೆಯಲ್ಲಿ ಧ್ವಂಸಗೈದರು.
ಈ ಸಂದರ್ಭದಲ್ಲಿ ಪಾಂಡವ ಪಾಳಯದಲ್ಲಿ ಕೋಲಾಹಲವುಂಟಾದಾಗ ದ್ರೋಣಾಚಾರ್ಯರ ಶಕ್ತಿಯನ್ನು ತಡೆಯುವ ನಿಟ್ಟಿನಲ್ಲಿ ಪಾಂಡವ ಪಕ್ಷಪಾತಿ ಶ್ರೀಕೃಷ್ಣನು ಉಪಾಯವೊಂದನ್ನು ಹೂಡುತ್ತಾನೆ. ಆತನ ಯೋಜನೆಯ ಪ್ರಕಾರ, ದ್ರೋಣಪುತ್ರ ಅಶ್ವತ್ಥಾಮ ಸಾವನ್ನಪ್ಪಿದುದಾಗಿ ವದಂತಿ ಹಬ್ಬಿಸಲಾಗುತ್ತದೆ.
ಸುದ್ದಿಯ ನಿಜಾವಸ್ಥೆಯನ್ನು ಅರಿಯಲು ದ್ರೋಣಾಚಾರ್ಯರು ಸತ್ಯಪಕ್ಷಪಾತಿಯಾದ ಯುಧಿಷ್ಠಿರನನ್ನು ಸಂಪರ್ಕಿಸಿ ವದಂತಿಯ ವಾಸ್ತವಾಂಶವನ್ನು ವಿಚಾರಿಸಿದರು. ಯುಧಿಷ್ಠಿರನು ಈ ರೀತಿಯಾಗಿ ಉತ್ತರಿಸಿದನು.
‘ಅಶ್ವತ್ಥಾಮಾ ಹತೋ ನರೋವ ಕುಂಜರೋ ವ ’ ಅಂದರೆ, “ಅಶ್ವತ್ಥಾಮ ಸತ್ತಿರುವುದು ಹೌದು, ಆದರೆ ಅದು ಮನುಷ್ಯನೇ ಅಥವಾ ಆನೆಯೇ ಎಂಬುದು ನನಗೆ ತಿಳಿಯದು ”
ಯುಧಿಷ್ಠಿರನಿಂದ ಈ ಉತ್ತರವನ್ನು ಆಲಿಸಿದ ದ್ರೋಣಾಚಾರ್ಯರು ತಮ್ಮ ಪುತ್ರ ಚಿರಂಜೀವಿ ಎಂಬುದನ್ನೂ ಮರೆತು, ಪುತ್ರವಿಯೋಗದ ಶೋಕದಿಂದ ಮೂರ್ಛಿತರಾದರು.
ಇತ್ತ ರಣರಂಗದಲ್ಲಿ ಇದೇ ಸಂದರ್ಭದಲ್ಲಿ ಪಾಂಚಾಲ ದೊರೆ ಪುತ್ರ ದೃಷ್ಟದ್ಯುಮ್ನನು ಗುರು ದ್ರೋಣರನ್ನು ವಧಿಸುತ್ತಾನೆ. ಆದರೆ, ವಾಸ್ತವ ಭಿನ್ನವಾಗಿತ್ತು. ದ್ರೋಣರ ಪುತ್ರ ಅಶ್ವತ್ಥಾಮ ಸತ್ತಿರಲಿಲ್ಲ. ಯುದ್ಧರಂಗದಲ್ಲಿದ್ದ ‘ಅಶ್ವತ್ಥಾಮ ’ ಆನೆಯೊಂದು ಮೃತಪಟ್ಟಿತ್ತು. ಆದರೆ ಪ್ರತಿಯೊಬ್ಬರೂ ದ್ರೋಣಪುತ್ರ ಅಶ್ವತ್ಥಾಮನೇ ಮೃತಪಟ್ಟಿರುವುದಾಗಿ ಭಾವಿಸಿದ್ದರು.
ಕೃಪೆ: ಸಾಮಾಜಿಕ ಜಾಲತಾಣ.