ದೊಡ್ಡಬಳ್ಳಾಪುರ (Doddaballapura): ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯ ತಾಲೂಕಿನ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ವ್ಯಾಪ್ತಿಯಲ್ಲಿ ಜನ, ಜಾನುವಾರು ಜೀವನಕ್ಕೆ ಮಾರಕವಾಗಿರುವ ಬೆನ್ನಲ್ಲೇ, ಈಗ ವನ್ಯ ಜೀವಿಗಳ ಪ್ರಾಣಕ್ಕೆ ಕುತ್ತು ತರಲು ದುಷ್ಕರ್ಮಿಗಳು ಮುಂದಾಗಿದ್ದಾರೆ.
ಹೌದು ತಾಲೂಕಿನ ಹೊಸಹಳ್ಳಿ ರಸ್ತೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಏಕಾಏಕಿ ಅಪಾರ ಪ್ರಮಾಣದಲ್ಲಿ ಕಾರ್ಖಾನೆ ತ್ಯಾಜ್ಯವನ್ನು ತಂದು ಸುರಿದಿದ್ದು, ಈ ವ್ಯಾಪ್ತಿಯಲ್ಲಿ ಉಸಿರು ಗಟ್ಟುವ ಸ್ಥಿತಿ ಎದುರಾಗಿದೆ.
ಇಷ್ಟು ದಿನ ಈ ವ್ಯಾಪ್ತಿಯಲ್ಲಿ ಕೋಳಿ ತ್ಯಾಜ್ಯದ ದುರ್ವಾಸನೆಯಿಂದ ಬಸವಳಿಯುತ್ತಿದ್ದ ಜನತೆಗೆ, ಈಗ ದಿಢೀರನೆ ಕಾರ್ಖಾನೆಯ ತ್ಯಾಜ್ಯ ಸುರಿದಿರುವುದು ಕಂಡು ಹೌಹಾರಿದ್ದಾರೆ.
ದೊಡ್ಡಮಟ್ಟದ ಟ್ಯಾಂಕರ್‌ಗಳಲ್ಲಿ ತಂದು ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ಸುರಿಯಲಾಗಿದ್ದು, ಈ ವ್ಯಾಪ್ತಿಯಲ್ಲಿ ಓಡಾಡಲು ಸಹ ಅಸಾಧ್ಯವಾದ ಸ್ಥಿತಿ ಎದುರಾಗಿದೆ.
ದೊಡ್ಡಬಳ್ಳಾಪುರ ಮತ್ತು ಹೊಸಹಳ್ಳಿ ನಡುವೆ ಇರುವ ಅರಣ್ಯ ಪ್ರದೇಶದಲ್ಲಿನ ರಸ್ತೆಯ ಸಮೀಪದಲ್ಲಿಯೇ ದುಷ್ಕರ್ಮಿಗಳು ಕೆಮಿಕಲ್ ತ್ಯಾಜ್ಯವನ್ನು ಸುರಿದಿದ್ದು, ದುರ್ವಾಸೆಯಿಂದಾಗಿ ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನ ಸವಾರರು ಉಸಿರು ಗಟ್ಟುವ ಸ್ಥಿತಿ ಎದುರಾಗಿದೆ.
ಮಾಕಳಿ ಬೆಟ್ಟದ ಸಾಲಿನಲ್ಲಿ ಅಮೂಲ್ಯ ವನ್ಯ ಜೀವಿಗಳು ಜೀವಿಸುತ್ತಿವೆ. ಈಗ ಕಾರ್ಖಾನೆ ತ್ಯಾಜ್ಯ ಸುರಿದಿರುವುದರಿಂದಾಗಿ ಅವುಗಳ ಮೇಲೆ ದುಷ್ಪರಿಣಾಮ ಬಿರುವ ಆತಂಕ ಎದುರಾಗಿದೆ.
ಅಲ್ಲದೆ ಈ ತ್ಯಾಜ್ಯ ನೀರು ದೊಡ್ಡಹಳ್ಳದ ಮೂಲಕ ಗುಂಡಮಗೆರೆ ಕೆರೆಗೆ ಸೇರಿ, ಜಲಚರಗಳು ಸಾವನಪ್ಪುವ ಆತಂಕ ಎದುರಾಗಿದೆ.
ಈ ಕುರಿತಂತೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳ ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕೆಂದು ತಾಲೂಕು ಆಡಳಿತ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.