ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ (Operation Sindoora) ಯಶಸ್ವಿಯಾದ ಹಿನ್ನಲೆ, ಸೇನಾ ಪಡೆಗಳ ಪರಾಕ್ರಮವನ್ನು ಸ್ಮರಿಸಿ ಹಾಗೂ ಭಯೋತ್ಪಾದನೆಯನ್ನು ಖಂಡಿಸಿ, ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು ಘೋಷಣೆಯಡಿ ಬಿಜೆಪಿ ಕರೆ ನೀಡಿರುವ ತಿರಂಗಾ ಜಾಥಾ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಬಯಲು ಬಸವಣ್ಣ ದೇವಾಲಯದ ಬಳಿಯಿಂದ ತಾಲೂಕು ಕಚೇರಿ ವೃತ್ತದವರೆಗೆ ನಡೆದ ತಿರಂಗ ಜಾಥಾದಲ್ಲಿ ಗಣ್ಯರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರ ಧ್ವಜಗಳನ್ನು ಹಿಡಿದು ಹಾಗೂ 500 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ ನಡೆಸಿದರು.
ಜಾಥಾದಲ್ಲಿ ದೇಶಭಕ್ತಿ ಸಾರುವ ಹಾಗೂ ಉಗ್ರವಾದವನ್ನು ಖಂಡಿಸುವ ಘೋಷಣೆಗಳನ್ನು ಕೂಗಲಾಯಿತು.
ಸೇನಾಧಿಕಾರಿ ಕರ್ನಲ್ ರಾಮದಾಸ್ ಮಾತನಾಡಿ, ದೇಶದ ಭವಿಷ್ಯ ಪ್ರಜೆಗಳ ಕೈಲಿದ್ದು, ನಮ್ಮ ದೇಶವನ್ನು ಉಳಿಸುತ್ತೇವೆ ಎನ್ನುವ ಶಪಥವನ್ನು ನಾವು ಕೈಗೊಳ್ಳಬೇಕಿದೆ. ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ 3ನೇ ಸ್ಥಾನದಲ್ಲಿರುವ ಭಾರತ ಯಾರೇ ಆಕ್ರಮಣ ಮಾಡಿದರೂ ನುಗ್ಗಿ ಹೊಡೆಯುವ ಶಕ್ತಿ ಹೊಂದಿದೆ. ಉಗ್ರವಾದ, ಭಯೋತ್ಪಾದನೆಗಳು ಜಗತ್ತಿಗೆ ಮಾರಕವಾಗಿದ್ದು, ಇವು ಅಳಿಯಬೇಕು ಎಂದರು.
ಇದೇ ವೇಳೆ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ದೊಡ್ಡಬಳ್ಳಾಪುರ ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಮೊದಲಾದವರು ಭಾಗವಹಿಸಿದ್ದರು.